Karan Johar: ಬ್ರಿಟನ್​ ಪಾರ್ಲಿಮೆಂಟ್​ನಲ್ಲಿ ಕರಣ್​ ಜೋಹರ್​ಗೆ ಸಿಗಲಿದೆ ವಿಶೇಷ ಗೌರವ

|

Updated on: Jun 18, 2023 | 2:58 PM

Britain Parliament: ಈ ಸುದ್ದಿ ಕೇಳಿ ಕರಣ್​ ಜೋಹರ್​ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಕೆಲವರು ಇದನ್ನು ಟೀಕಿಸಿದ್ದಾರೆ.

Karan Johar: ಬ್ರಿಟನ್​ ಪಾರ್ಲಿಮೆಂಟ್​ನಲ್ಲಿ ಕರಣ್​ ಜೋಹರ್​ಗೆ ಸಿಗಲಿದೆ ವಿಶೇಷ ಗೌರವ
ಕರಣ್​ ಜೋಹರ್​
Follow us on

ಬಾಲಿವುಡ್​ನ (Bollywood) ಫೇಮಸ್​ ಸೆಲೆಬ್ರಿಟಿ ಕರಣ್​ ಜೋಹರ್​ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಈಗ ಒಂದು ವಿಶೇಷ ಗೌರವ ಸಲ್ಲಿಕೆ ಆಗುತ್ತಿದೆ. ಬ್ರಿಟನ್​ ಪಾರ್ಲಿಮೆಂಟ್​ನಲ್ಲಿ (Britain Parliament) ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜೂನ್​​ 20ರಂದು ಕರಣ್​ ಜೋಹರ್​ ಅವರಿಗೆ ಸನ್ಮಾನ ಮಾಡಲಾಗುವುದು. ಈ ಸುದ್ದಿ ಕೇಳಿ ಕರಣ್​ ಜೋಹರ್​ (Karan Johar) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಕೆಲವರು ಇದನ್ನು ಟೀಕಿಸಿದ್ದಾರೆ. ನೆಪೋಟಿಸಂ ಬೆಂಬಲಿಸುವ ಕರಣ್​ ಜೋಹರ್​ಗೆ ಈ ಮನ್ನಣೆ ನೀಡುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ವಿರೋಧಿಸಿದ್ದಾರೆ.

ಬ್ರಿಟನ್​ ಜೊತೆ ಕರಣ್​ ಜೋಹರ್​ ಅವರು ನಂಟು ಹೊಂದಿದ್ದಾರೆ. ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’, ‘ಯೇ ದಿಲ್​ ಹೈ ಮುಷ್ಕಿಲ್​’ ಮುಂತಾದ ಸಿನಿಮಾಗಳನ್ನು ಅವರು ಬ್ರಿಟನ್​ನಲ್ಲಿ ಚಿತ್ರೀಕರಣ ಮಾಡಿದ್ದರು. ಆ ಸಿನಿಮಾಗಳು ಅಲ್ಲಿ ಉತ್ತಮ ಕಲೆಕ್ಷನ್​ ಮಾಡಿದ್ದವು. 2012ರಲ್ಲಿ ಬ್ರಿಟನ್​ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಆಗಿಯೂ ಕರಣ್​ ಜೋಹರ್​ ಅವರು ನೇಮಕ ಆಗಿದ್ದರು.

ಇದನ್ನೂ ಓದಿ: ನೆಪೋಟಿಸಂ ಅಂದ್ರೆ ನೆನಪಾಗೋದೇ ಕರಣ್​ ಜೋಹರ್​

‘ಈ ಗೌರವಕ್ಕೆ ಪಾತ್ರವಾಗಲು ನಾನು ಇನ್ನೂ ಅಂಥ ಸಾಧನೆ ಮಾಡಿಲ್ಲ. ನನಗಿಂತ ಪ್ರತಿಭಾವಂತ ನಿರ್ದೇಶಕರು ಇದ್ದಾರೆ’ ಎಂದು ಕರಣ್​ ಜೋಹರ್ ಪ್ರತಿಕ್ರಿಯಿಸಿರುವುದಾಗಿ ‘ಟೈಮ್ಸ್​ ಆಫ್​ ಇಂಡಿಯಾ’ ವರದಿ ಮಾಡಿದೆ. ಬಾಲಿವುಡ್​ನಲ್ಲಿ ಪ್ರಭಾವಿ ನಿರ್ದೇಶಕ, ನಿರ್ಮಾಪಕನಾಗಿ ಕರಣ್​ ಜೋಹರ್​ ಗುರುತಿಸಿಕೊಂಡಿದ್ದಾರೆ. ಅವರು ‘ಧರ್ಮ ಪ್ರೊಡಕ್ಷನ್ಸ್​’ ಬ್ಯಾನರ್​ ಮೂಲಕ ಅನೇಕರಿಗೆ ಅವಕಾಶ ನೀಡಿದ್ದಾರೆ. ಆದರೆ ಸ್ಟಾರ್​ ಮಕ್ಕಳಿಗೆ ಮಾತ್ರ ಅವರು ಮಣೆ ಹಾಕುತ್ತಾರೆ ಎಂಬ ಆರೋಪ ಇದೆ. ಹಾಗಾಗಿ ಅವರ ವಿರುದ್ಧ ಕಂಗನಾ ರಣಾವತ್​ ಆಗಾಗ ಕಿಡಿ ಕಾರುತ್ತಾರೆ.

ಇದನ್ನೂ ಓದಿ: Karan Johar: ನೆಪೋಟಿಸಂ ಬಗ್ಗೆಯೇ ಒಟಿಟಿಯಲ್ಲಿ ಕಾರ್ಯಕ್ರಮ ಮಾಡಲಿರುವ ಕರಣ್​ ಜೋಹರ್​

ನಿರೂಪಣೆಯಲ್ಲೂ ಕರಣ್​ ಜೋಹರ್​ ಫೇಮಸ್​. ಅನೇಕ ಅವಾರ್ಡ್​​ ಫಂಕ್ಷನ್​ಗಳನ್ನು ನಡೆಸಿಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಕಾಫಿ ವಿತ್​ ಕರಣ್​’ ಚಾಟ್ ಶೋ ಮೂಲಕ ಅವರು ಸಖತ್​ ಸುದ್ದಿ ಆಗಿದ್ದರು. ಈಗ ನಿರ್ದೇಶನದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಅವರು ಜೋಡಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.