ವಂಚನೆ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಖ್ಯಾತ ನಟಿ ಅಮೀಷಾ ಪಟೇಲ್
Ameesha Patel: ಮುಖಕ್ಕೆ ಬಟ್ಟೆ ಸುತ್ತಿಕೊಂಡು, ತಲೆ ಬಗ್ಗಿಸಿಕೊಂಡು ನ್ಯಾಯಾಲಯದ ಕಾರಿಡಾರ್ನಲ್ಲಿ ಲಘು-ಬಗನೆ ಓಡುವ ಸ್ಥಿತಿ ಬಾಲಿವುಡ್ನ ಸ್ಟಾರ್ ನಟಿಯಾಗಿದ್ದ ಅಮೀಷಾ ಪಟೇಲ್ಗೆ ಬಂದಿದೆ.
2000 ದಶಕದ ಬಾಲಿವುಡ್ನ (Bollywood) ಟಾಪ್ ನಟಿ, ಈಗಲೂ ನಟನೆಯಲ್ಲಿ ಸಕ್ರಿಯರಾಗಿರುವ ನಟಿ ಅಮೀಷಾ ಪಟೇಲ್ (Ameesha Patel) ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಸಹಾಯಕರೊಬ್ಬರೊಡನೆ ನ್ಯಾಯಾಲಯಕ್ಕೆ ಆಗಮಿಸಿದ ಅಮೀಷಾ ಪಟೇಲ್ ನ್ಯಾಯಾಧೀಶರ ಮುಂದೆ ಹಾಜರಾದರು. ಅಮೀಷಾ ಪಟೇಲ್ ವಿರುದ್ಧ ರಾಂಚಿ ನ್ಯಾಯಾಲಯ (Court) ಬಂಧನದ ವಾರೆಂಟ್ ಹೊರಡಿಸಿತ್ತು, ಬಂಧನದಿಂದ ತಪ್ಪಿಸಿಕೊಳ್ಳಲೆಂದು ಅಮೀಷಾ ಪಟೇಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
2018ರಲ್ಲಿ ನಟಿಯ ವಿರುದ್ಧ ಹೂಡಲಾಗಿದ್ದ ವಂಚನೆ ಪ್ರಕರಣದಲ್ಲಿ ನಟಿಯ ವಿರುದ್ದ ವಾರೆಂಟ್ ಹೊರಡಿಸಲಾಗಿತ್ತು. ಹಲವು ಬಾರಿ ನೊಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣದಿಂದ ಸಿವಿಲ್ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿತ್ತು. ಈಗ ಬಂಧನದಿಂದ ತಪ್ಪಿಸಿಕೊಳ್ಳಲು ನಟಿಯು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನಟಿಗೆ ಜಾಮೀನು ನೀಡಲಾಗಿದ್ದು, ಜೂನ್ 21 ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
2018 ರಲ್ಲಿ ಜಾರ್ಖಂಡ್ ಮೂಲದ ಸಿನಿಮಾ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಎಂಬುವರು ನಟಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ದೇಸಿ ಮ್ಯಾಜಿಕ್ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದ ಅಮೀಷಾ ಪಟೇಲ್ ಖಾತೆಗೆ ಅಜಯ್ ಕುಮಾರ್ ಸಿಂಗ್ 2.50 ಕೋಟಿ ಹಣ ವರ್ಗಾವಣೆ ಮಾಡಿದ್ದರು. ಆದರೆ ಅಮೀಷಾ ಪಟೇಲ್ ಸಿನಿಮಾ ಮಾಡದೆ ಹಣವನ್ನು ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿದ್ದರು. ಬಳಿಕ ಅಮೀಷಾ ಪಟೇಲ್ 2.50 ಕೋಟಿಯ ಚೆಕ್ ಅನ್ನು ಅಜಯ್ ಕುಮಾರ್ಗೆ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಅಜಯ್ ಕುಮಾರ್ ಸಿಂಗ್ ನಟಿಯ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಗದರ್ 2: ಮತ್ತೆ ಲಾಹೋರ್ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?
ರಾಂಚಿ ನ್ಯಾಯಾಲಯವು ಈ ಹಿಂದೆ ಹಲವು ಬಾರಿ ನಟಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಯಾವೊಂದಕ್ಕೂ ನಟಿ ಉತ್ತರ ನೀಡಿರಲಿಲ್ಲ, ಖುದ್ದಾಗಿ ಹಾಜರು ಸಹ ಆಗಿರಲಿಲ್ಲ ಹಾಗಾಗಿ ನಟಿಯ ವಿರುದ್ಧ ಬಂಧನದ ವಾರೆಂಟ್ ಅನ್ನು ಇತ್ತೀಚೆಗೆ ಹೊರಡಿಸಲಾಗಿತ್ತು. 2022 ರಲ್ಲಿ ಅಮೀಷಾ ಪಟೇಲ್ ತನ್ನ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳದಂತೆ ಸೂಚಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅಮೀಷಾ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ವಿರುದ್ಧ ಕ್ರಮಕ್ಕೆ ತಡೆ ಸಿಕ್ಕಿತಾದರೂ ಚೆಕ್ ಬೌನ್ಸ್ ಪ್ರಕರಣವು ಶಿಕ್ಷಾರ್ಹ ಪ್ರಕರಣವಾದ್ದರಿಂದ ತನಿಖೆ ಹಾಗೂ ವಿಚಾರಣೆಗೆ ತಡೆ ನೀಡಿರಲಿಲ್ಲ.
ಮತ್ತೆ ಅಮೀಷಾ ಪಟೇಲ್ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಪ್ರಕರಣವನ್ನು ಹಾಗೂ ಸಿವಿಲ್ ನ್ಯಾಯಾಲಯ ನೀಡಿರುವ ಸಮನ್ಸ್ ಅನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದರೆ ಅಮೀಷಾರ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿತು. ಈಗ ಅಂತಿಮವಾಗಿ ಅಮೀಷಾ ಪಟೇಲ್ ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಕಹೋ ನಾ ಪ್ಯಾರ್ ಹೈ, ಗದರ್, ಮಂಗಲ್ ಪಾಂಡೆ, ಹಮ್ರಾಜ್, ಕ್ರಾಂತಿ, ಭೂಲ್ ಭುಲಯ್ಯ ಸೇರಿದಂತೆ ಹಲವು ಸೂಪರ್ ಹಿಟ್ ಹಿಂದಿ ಸಿನಿಮಾಗಳಲ್ಲಿ ಅಮೀಷಾ ಪಟೇಲ್ ನಟಿಸಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ ಭದ್ರಿ, ಮಹೇಶ್ ಬಾಬು ಜೊತೆಗೆ ನಾನಿ, ಬಾಲಕೃಷ್ಣ ಜೊತೆ ನರಸಿಂಹುಡು ಸಿನಿಮಾಗಳಲ್ಲಿಯೂ ಅಮೀಷಾ ಪಟೇಲ್ ನಟಿಸಿದ್ದಾರೆ. ಒಂದು ತಮಿಳು ಸಿನಿಮಾದಲ್ಲಿಯೂ ಅಮೀಷಾ ನಟಿಸಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ಗದರ್ 2 ಸಿನಿಮಾದಲ್ಲಿ ಸಹ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ