Karan Johar: ಬ್ರಿಟನ್ ಪಾರ್ಲಿಮೆಂಟ್ನಲ್ಲಿ ಕರಣ್ ಜೋಹರ್ಗೆ ಸಿಗಲಿದೆ ವಿಶೇಷ ಗೌರವ
Britain Parliament: ಈ ಸುದ್ದಿ ಕೇಳಿ ಕರಣ್ ಜೋಹರ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಕೆಲವರು ಇದನ್ನು ಟೀಕಿಸಿದ್ದಾರೆ.
ಬಾಲಿವುಡ್ನ (Bollywood) ಫೇಮಸ್ ಸೆಲೆಬ್ರಿಟಿ ಕರಣ್ ಜೋಹರ್ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಈಗ ಒಂದು ವಿಶೇಷ ಗೌರವ ಸಲ್ಲಿಕೆ ಆಗುತ್ತಿದೆ. ಬ್ರಿಟನ್ ಪಾರ್ಲಿಮೆಂಟ್ನಲ್ಲಿ (Britain Parliament) ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜೂನ್ 20ರಂದು ಕರಣ್ ಜೋಹರ್ ಅವರಿಗೆ ಸನ್ಮಾನ ಮಾಡಲಾಗುವುದು. ಈ ಸುದ್ದಿ ಕೇಳಿ ಕರಣ್ ಜೋಹರ್ (Karan Johar) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಕೆಲವರು ಇದನ್ನು ಟೀಕಿಸಿದ್ದಾರೆ. ನೆಪೋಟಿಸಂ ಬೆಂಬಲಿಸುವ ಕರಣ್ ಜೋಹರ್ಗೆ ಈ ಮನ್ನಣೆ ನೀಡುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ವಿರೋಧಿಸಿದ್ದಾರೆ.
ಬ್ರಿಟನ್ ಜೊತೆ ಕರಣ್ ಜೋಹರ್ ಅವರು ನಂಟು ಹೊಂದಿದ್ದಾರೆ. ‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಯೇ ದಿಲ್ ಹೈ ಮುಷ್ಕಿಲ್’ ಮುಂತಾದ ಸಿನಿಮಾಗಳನ್ನು ಅವರು ಬ್ರಿಟನ್ನಲ್ಲಿ ಚಿತ್ರೀಕರಣ ಮಾಡಿದ್ದರು. ಆ ಸಿನಿಮಾಗಳು ಅಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದವು. 2012ರಲ್ಲಿ ಬ್ರಿಟನ್ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಆಗಿಯೂ ಕರಣ್ ಜೋಹರ್ ಅವರು ನೇಮಕ ಆಗಿದ್ದರು.
ಇದನ್ನೂ ಓದಿ: ನೆಪೋಟಿಸಂ ಅಂದ್ರೆ ನೆನಪಾಗೋದೇ ಕರಣ್ ಜೋಹರ್
‘ಈ ಗೌರವಕ್ಕೆ ಪಾತ್ರವಾಗಲು ನಾನು ಇನ್ನೂ ಅಂಥ ಸಾಧನೆ ಮಾಡಿಲ್ಲ. ನನಗಿಂತ ಪ್ರತಿಭಾವಂತ ನಿರ್ದೇಶಕರು ಇದ್ದಾರೆ’ ಎಂದು ಕರಣ್ ಜೋಹರ್ ಪ್ರತಿಕ್ರಿಯಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಬಾಲಿವುಡ್ನಲ್ಲಿ ಪ್ರಭಾವಿ ನಿರ್ದೇಶಕ, ನಿರ್ಮಾಪಕನಾಗಿ ಕರಣ್ ಜೋಹರ್ ಗುರುತಿಸಿಕೊಂಡಿದ್ದಾರೆ. ಅವರು ‘ಧರ್ಮ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಅನೇಕರಿಗೆ ಅವಕಾಶ ನೀಡಿದ್ದಾರೆ. ಆದರೆ ಸ್ಟಾರ್ ಮಕ್ಕಳಿಗೆ ಮಾತ್ರ ಅವರು ಮಣೆ ಹಾಕುತ್ತಾರೆ ಎಂಬ ಆರೋಪ ಇದೆ. ಹಾಗಾಗಿ ಅವರ ವಿರುದ್ಧ ಕಂಗನಾ ರಣಾವತ್ ಆಗಾಗ ಕಿಡಿ ಕಾರುತ್ತಾರೆ.
ಇದನ್ನೂ ಓದಿ: Karan Johar: ನೆಪೋಟಿಸಂ ಬಗ್ಗೆಯೇ ಒಟಿಟಿಯಲ್ಲಿ ಕಾರ್ಯಕ್ರಮ ಮಾಡಲಿರುವ ಕರಣ್ ಜೋಹರ್
ನಿರೂಪಣೆಯಲ್ಲೂ ಕರಣ್ ಜೋಹರ್ ಫೇಮಸ್. ಅನೇಕ ಅವಾರ್ಡ್ ಫಂಕ್ಷನ್ಗಳನ್ನು ನಡೆಸಿಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಕಾಫಿ ವಿತ್ ಕರಣ್’ ಚಾಟ್ ಶೋ ಮೂಲಕ ಅವರು ಸಖತ್ ಸುದ್ದಿ ಆಗಿದ್ದರು. ಈಗ ನಿರ್ದೇಶನದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಜೋಡಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.