ದಕ್ಷಿಣ ಭಾರತದ (South Movie) ಸಿನಿಮಾಗಳನ್ನು ರೀಮೇಕ್ (Remake) ಮಾಡಿ ಕೋಟಿಗಟ್ಟಲೆ ಬಾಚುವ ಅಭ್ಯಾಸ ಬಾಲಿವುಡ್ಡಿಗರಿಗೆ ಬಹಳ ಹಳೆಯದ್ದು. ಸಲ್ಮಾನ್ ಖಾನ್ (Salman Khan), ಕರಣ್ ಜೋಹರ್ (Karan Johar), ಅಜಯ್ ದೇವಗನ್ ಇನ್ನೂ ಹಲವು ಸ್ಟಾರ್ ನಟ, ನಿರ್ದೇಶಕರು ದಶಕಗಳಿಂದಲೂ ದಕ್ಷಿಣ ಭಾರತದ ಸಿನಿಮಾಗಳನ್ನು ರೀಮೇಕ್ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದ ಮೇಲೆ ಬಾಲಿವುಡ್ನವರ ಈ ಚಾಳಿ ಕಡಿಮೆಯಾಗಿದೆಯಾದರೂ ಪೂರ್ತಿಯಾಗಿ ನಿಂತಿಲ್ಲ. ಇದೀಗ ಕರಣ್ ಜೋಹರ್ ಮತ್ತೊಂದು ದಕ್ಷಿಣ ಭಾರತದ ಹಿಟ್ ಸಿನಿಮಾವನ್ನು ರೀಮೇಕ್ ಮಾಡಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೆ ಕರಣ್ ಜೋಹರ್ ‘ದಡಕ್ 2’ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಮೊದಲು ಕರಣ್ ‘ಡಡಕ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಮೂಲಕ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಬಾಲಿವುಡ್ಗೆ ಎಂಟ್ರಿ ನೀಡಿದ್ದರು. ಈಗ ಆಕೆ ಸ್ಟಾರ್ ನಟಿ. ಈ ಸಿನಿಮಾ ಮರಾಠಿಯ ‘ಸೈರಾಟ್’ ಸಿನಿಮಾದ ರೀಮೇಕ್ ಆಗಿತ್ತು. ಮೂಲ ಸಿನಿಮಾದ ಅಮಾಯಕತೆ, ಪರಿಶುದ್ಧ ಪ್ರೇಮ, ಬಡವ-ಶ್ರೀಮಂತಿಕೆ ತಾರತಮ್ಯದ ಬಗ್ಗೆ ವ್ಯಕ್ತಪಡಿಸಲಾಗಿದ್ದ ಸಿಟ್ಟು, ಜಾತಿ ಅಸಮಾನತೆಗೆ ಹಿಡಿದಿದ್ದ ಕನ್ನಡಿ ಇದನ್ನೆಲ್ಲ ಬದಿಗೆ ಒತ್ತಿ, ‘ದಡಕ್’ನಲ್ಲಿ ಗ್ಲಾಮರ್ಗೆ ಒತ್ತು ನೀಡಲಾಗಿತ್ತು. ಸಿನಿಮಾ ಹಿಟ್ ಏನೋ ಆಯಿತು, ಆದರೆ ಕರಣ್, ತೀವ್ರ ಟೀಕೆಗೆ ಒಳಗಾಗಿದ್ದರು. ಈಗ ‘ದಡಕ್ 2’ ಸಿನಿಮಾ ಘೋಷಿಸಿದ್ದಾರೆ.
ಇದನ್ನೂ ಓದಿ:‘ಒಬ್ಬ ರಾಜ, ಒಬ್ಬಳು ರಾಣಿ, ಆದರೆ ಜಾತಿ ಬೇರೆ ಬೇರೆ’: ಕರಣ್ ಜೋಹರ್ ಹೊಸ ಸಿನಿಮಾ
ಕರಣ್ ಜೋಹರ್ , ‘ದಡಕ್ 2’ ಸಿನಿಮಾ ಘೋಷಿಸುತ್ತಿದ್ದಂತೆ ಸಿನಿಮಾ ಪ್ರೇಮಿಗಳು ಇದು ತಮಿಳಿನ ಪ್ರೇಮಕತೆಯೊಂದರ ರೀಮೇಕ್ ಎಂದು ಊಹಿಸಿದ್ದಾರೆ. ತಮಿಳಿನ ಹಿಟ್ ಸಿನಿಮಾ ‘ಪರಿಯೇರುಮ್ ಪೆರುಮಾಳ್’ ಸಿನಿಮಾವನ್ನೇ ‘ದಡಕ್ 2’ ಆಗಿ ರೀಮೇಕ್ ಮಾಡಲಾಗುತ್ತಿದ್ದೆ ಎಂದಿದ್ದಾರೆ. ಕೆಲವು ಬಾಲಿವುಡ್ ಮ್ಯಾಗಜೀನ್ಗಳ ವರದಿಗಳು ಸಹ ಇದನ್ನೇ ಹೇಳುತ್ತಿವೆ. ಒಂದೊಮ್ಮೆ ಕರಣ್, ‘ಪರಿಯೇರುಮ್ ಪೆರುಮಾಳ್’ ರೀಮೇಕ್ ಅನ್ನು ತಮ್ಮದೇ ‘ಗ್ಲಾಮರಸ್’ ವಿಧಾನದಲ್ಲಿ ರೀಮೇಕ್ ಮಾಡಿದಾದಲ್ಲಿ ತೀವ್ರ ಟೀಕೆಗೆ ಗುರಿಯಾಗುವುದಂತೂ ಖಾತ್ರಿ.
‘ಪರಿಯೇರುಮ್ ಪೆರುಮಾಳ್’ ಜಾತಿ ಪದ್ಧತಿಯ ವಿರುದ್ಧ ಕಟ್ಟಿದ ಸುಂದರ ಸಿನಿಮಾಗಳಲ್ಲಿ ಒಂದು. ತಮಿಳು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಮಾರಿ ಸೆಲ್ವರಾಜ್ ಈ ಸಿನಿಮಾದ ನಿರ್ದೇಶಕ. ಸಿನಿಮಾನಲ್ಲಿ ಕೆಳಜಾತಿಯ ಯುವಕನೊಬ್ಬ ಮೇಲ್ಜಾತಿಯ ಯುವತಿಯನ್ನು ಪ್ರೀತಿಸುತ್ತಾನೆ. ಯುವತಿಯ ಮನೆಯವರು ಯುವಕನ ಕೊಲ್ಲಲು ಯತ್ನಿಸುತ್ತಾರೆ. ಸಿನಿಮಾದಲ್ಲಿ ಜಾತಿಯ ವಿಷಯವಾಗಿ ಹಲವು ಸನ್ನಿವೇಶಗಳು, ದೃಶ್ಯಗಳು ಇವೆ. ಜಾತಿಯನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನೆ ಮಾಡುವ ಸಿನಿಮಾ ಇದು. ಇಂಥಹಾ ಸೂಕ್ಷ್ಮ ವಿಷಯವುಳ್ಳ ಸಿನಿಮಾವನ್ನು ರೀಮೇಕ್ಗೆ ಎತ್ತಿಕೊಂಡಿದ್ದಾರೆ ಕರಣ್. ಗೆಲ್ಲುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ