ಬಾಲಿವುಡ್ನ ಖ್ಯಾತ ನಟ ಕಾರ್ತಿಕ್ ಆರ್ಯನ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಖ್ಯಾತಿ ಎಲ್ಲ ಕಡೆಗಳಲ್ಲಿ ಹಬ್ಬಿದೆ. ಇತ್ತೀಚೆಗೆ ರಿಲೀಸ್ ಆದ ‘ಭೂಲ್ ಭುಲಯ್ಯ 3’ ಸಿನಿಮಾ ಮೂಲಕ ಅವರು ಗೆದ್ದಿದ್ದಾರೆ. ಅವರು ಈಗ ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ, ಮೊದಲು ಅವರ ಪರಿಸ್ಥಿತಿ ಈ ರೀತಿಯಲ್ಲಿ ಇರಲಿಲ್ಲ. ಅವರು ಮೊದಲ ಚಿತ್ರಕ್ಕೆ ಕೇವಲ ಸಾವಿರಗಳಲ್ಲಿ ಸಂಭಾವನೆ ಪಡೆದಿದ್ದರು. ಅವರಿಗೆ ಇಂದು (ನವೆಂಬರ್ 22) ಜನ್ಮದಿನ. ಎಲ್ಲ ಕಡೆಗಳಿಂದ ಅವರಿಗೆ ಶುಭಾಶಯ ಬರುತ್ತಿದೆ.
ಕಾರ್ತಿಕ್ ಆರ್ಯನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2011ರ ‘ಪ್ಯಾರ್ ಕಾ ಪಂಚ್ನಾಮ’ ಸಿನಿಮಾ ಮೂಲಕ. ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಈ ಕಾರಣಕ್ಕೆ ಅವರನ್ನು ಹೊರಗಿನವರು ಎಂದು ಕೆಲವರು ಪರಿಗಣಿಸಿದ್ದರು. ಆದರೆ, ಇಡೀ ಬಾಲಿವುಡ್ ಮೆಚ್ಚಿಕೊಳ್ಳುವಂತೆ ಅವರು ಸಿನಿಮಾ ಮಾಡಿದರು.
ಲವ್ ರಂಜನ್ ನಿರ್ದೇಶನದ ‘ಪ್ಯಾರ್ ಕಾ ಪಂಚ್ ನಾಮ’ ಸಿನಿಮಾ ಕೇವಲ 3 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ಈ ಸಿನಿಮಾ 17 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರದಿಂದ ನಿರ್ಮಾಪಕರು ಲಾಭ ಕಂಡಿದ್ದರು. ಈ ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಪಡೆದಿದ್ದು ಕೇವಲ 70 ಸಾವಿರ ರೂಪಾಯಿ! ಇದು ಅಚ್ಚರಿ ಎನಿಸಿದರೂ ನಿಜ. ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದ ಕಾರ್ತಿಕ್ ಆರ್ಯನ್ಗೆ ‘ಪ್ಯಾರ್ ಕಾ ಪಂಚ್ ನಾಮ’ ಸಿನಿಮಾ ದೊರೆತಿತ್ತು. ಈ ಚಿತ್ರದಿಂದ ಅವರು ಇಷ್ಟು ಕಡಿಮೆ ಸಂಭಾವನೆ ಪಡೆದರು.
ಹೊರಗಿನಿಂದ ಬಂದು ಬಾಲಿವುಡ್ನಲ್ಲಿ ಗೆಲುವ ಕಾಣಬೇಕು ಎಂದರೆ ಸುಲಭದ ಮಾತಲ್ಲ. ಈ ಕಾರಣಕ್ಕೆ ಮೊದಲು ಆಫರ್ ಸಿಗಲಿ ಆ ಬಳಿಕ ಸಂಭಾವನೆ ಬಗ್ಗೆ ಚಿಂತಿಸಿದರೆ ಆಯಿತು ಎಂದು ಕಾರ್ತಿಕ್ ಆರ್ಯನ್ ಅಂದುಕೊಂಡಿದ್ದರು. ಅವರು ಹಾಗೆಯೇ ಮಾಡಿದರು. ಕೊನೆಗೂ ಹಾಗೆಯೇ ಆಯಿತು. ಕಾರ್ತಿಕ್ ಆರ್ಯನ್ ಅವರಿಗೆ ಈ ಚಿತ್ರದಿಂದ ಬಾಲಿವುಡ್ ಬಾಗಿಲು ತೆರೆಯಿತು.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಕಾಲ್ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್
2018ರಲ್ಲಿ ಬಂದ ‘ಸೋನು ಕಿ ಟಿಟ್ಟೂಕಿ ಸ್ವೀಟಿ’ ಸಿನಿಮಾ ಯಶಸ್ಸು ಕಂಡಿತು. 2022ರ ‘ಭೂಲ್ ಭುಲಯ್ಯ 2’ ಅವರಿಗೆ ದೊಡ್ಡ ಯಶಸ್ಸು ನೀಡಿತು. ಅದೇ ರೀತಿ ‘ಭೂಲ್ ಭುಲಯ್ಯ 3’ ದೊಡ್ಡ ಗೆಲುವು ಕಂಡಿತು. ಕಾರ್ತಿಕ್ ಆರ್ಯನ್ ಬಳಿ ಲ್ಯಾಂಬೋರ್ಗಿನಿ ಕಾರು ಇದೆ. ಅವರ ಆಸ್ತಿ 46-50 ಕೋಟಿ ರೂಪಾಯಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.