ಬೆಂಗಳೂರಿನ ರಾಮೇಶ್ವರಮ್ ಕೆಫೆಗೆ ಬಂದ ಬಾಲಿವುಡ್ ಸ್ಟಾರ್ ನಟ

|

Updated on: Feb 24, 2024 | 10:08 PM

Karthik Aryan: ಬಾಲಿವುಡ್​ನ ಜನಪ್ರಿಯ ಯುವನಟ ಕಾರ್ತಿಕ್ ಆರ್ಯನ್ ಬೆಂಗಳೂರಿನ ಜನಪ್ರಿಯ ಹೋಟೆಲ್​ಗಳಿಗೆ ಭೇಟಿ ನೀಡಿದ್ದಾರೆ. ಕನ್ನಡದಲ್ಲಿಯೇ ಆರ್ಡರ್ ಸಹ ಮಾಡಿದ್ದಾರೆ.

ಬೆಂಗಳೂರಿನ ರಾಮೇಶ್ವರಮ್ ಕೆಫೆಗೆ ಬಂದ ಬಾಲಿವುಡ್ ಸ್ಟಾರ್ ನಟ
ಕಾರ್ತಿಕ್ ಆರ್ಯನ್
Follow us on

ಬೆಂಗಳೂರಿನ ದಿ ರಾಮೇಶ್ವರಂ ಕೆಫೆ (The Rameshwaram Cafe) ದೇಶದಾದ್ಯಂತ ಸುದ್ದಿಯಾಗಿದೆ. ರುಚಿ, ಶುಚಿಗೆ ಹೆಸರುವಾಸಿಯಾಗಿರುವ ಜೊತೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕ ಸ್ನೇಹಿ ಸೇವೆಗಳನ್ನು ರಾಮೇಶ್ವರಮ್ ಕೆಫೆ ನೀಡುತ್ತಿದೆ. ರಾಜ್ಯದ, ಹೊರ ರಾಜ್ಯಗಳ ಯೂಟ್ಯೂಬರ್​ಗಳು ರಾಮೇಶ್ವರಮ್ ಕೆಫೆ ಕುರಿತು ವಿಡಿಯೋಗಳನ್ನು ಪ್ರಕಟಿಸಿದ್ದಾರೆ. ಹಲವು ಹೊಸ ಬ್ಯುಸಿನೆಸ್​ಮೆನ್​ಗಳು ಸಹ ರಾಮೇಶ್ವರಮ್ ಕೆಫೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಮೇಶ್ವರಮ್ ಕೆಫೆ ಕೇವಲ ಹೋಟೆಲ್ ಆಗಿ ಮಾತ್ರವೇ ಉಳಿಯದೆ ಒಂದು ರೀತಿಯ ಪ್ರಚಾರ ಸ್ಥಳವಾಗಿಯೂ ಮಾರ್ಪಟ್ಟಿದೆ. ಇದೀಗ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Karthik Aryan) ರಾಮೇಶ್ವರಮ್ ಕೆಫೆಗೆ ಭೇಟಿ ನೀಡಿದ್ದಾರೆ.

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬೆಂಗಳೂರಿಗೆ ಆಗಮಿಸಿದ್ದು, ನಗರದ ಪ್ರಮುಖ ಹೋಟೆಲ್​ಗಳಿಗೆ ಭೇಟಿ ನೀಡಿ ಊಟದ ಸವಿ ಸವಿದಿದ್ದಾರೆ. ದೇಶವ್ಯಾಪಿ ಜನಪ್ರಿಯಗೊಂಡಿರುವ ದಿ ರಾಮೇಶ್ವರಮ್ ಕೆಫೆಗೆ ಭೇಟಿ ನೀಡಿದ ನಟ ಕಾರ್ತಿಕ್ ಆರ್ಯನ್ ಹಾಗೂ ಗೆಳೆಯರು, ದೋಸೆ, ಇಡ್ಲಿ ಇನ್ನಿತರೆ ತಿಂಡಿಗಳನ್ನು ತಿಂದಿದ್ದಾರೆ. ಜೊತೆಗೆ ಫಿಲ್ಟರ್ ಕಾಫಿ ಕುಡಿದಿದ್ದಾರೆ. ವಿಶೇಷವೆಂದರೆ ‘ದಿ ರಾಮೇಶ್ವರನ್ ಕೆಫೆ’ಯಲ್ಲಿ ನಟ ಕಾರ್ತಿಕ್ ಆರ್ಯನ್ ಕನ್ನಡದಲ್ಲಿ ಆರ್ಡರ್ ಮಾಡಿದ್ದಾರೆ. ಆ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

‘ದಿ ರಾಮೇಶ್ವರಮ್ ಕೆಫೆ’ ಮಾತ್ರವೇ ಅಲ್ಲದೆ ಬೆಂಗಳೂರಿನ ಜನಪ್ರಿಯ ಆಂಧ್ರ ಭೋಜನ ಹೋಟೆಲ್ ನಾಗಾರ್ಜುನಗೂ ಗೆಳೆಯರೊಟ್ಟಿಗೆ ಭೇಟಿ ನೀಡಿದ್ದಾರೆ. ನಾಗಾರ್ಜುನ ನಲ್ಲಿ ಸಸ್ಯಹಾರ ಭೋಜನವನ್ನು ಎಂಜಾಯ್ ಮಾಡಿದ್ದಾರೆ. ನಾಗಾರ್ಜುನ ಹೋಟೆಲ್​ನಲ್ಲಿ ಬಡಿಸಲಾಗುವ ವಿವಿಧ ಪಲ್ಯಗಳು, ಸಾಂಬಾರ್ ಗಳ ಹೆಸರು ಕೇಳಿ ತಿಳಿದುಕೊಂಡು ಸವಿದು ಖುಷಿ ಪಟ್ಟಿದ್ದಾರೆ. ಚಿತ್ರಗಳು, ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ಕಾರ್ತಿಕ್ ಆರ್ಯನ್, ‘ಬೆಂಗಳೂರಿನ ಈ ಐಕಾನಿಕ್ ಖಾದ್ಯ ಮಳಿಗೆಗಳಿಗೆ ಭೇಟಿ ನೀಡಿದಮೇಲೆ ಅನ್ನಿಸುತ್ತಿದೆ, ಫುಡ್ ವ್ಲಾಗರ್ ಆಗಿಬಿಡಲಾ ಎಂದು’ ಎಂದಿದ್ದಾರೆ.

ಕಾರ್ತಿಕ್ ಆರ್ಯನ್ ಬಾಲಿವುಡ್​ನ ಜನಪ್ರಿಯ ಯುವನಟ. ಕಳೆದ ವರ್ಷ ಕಾರ್ತಿಕ್ ನಟಿಸಿದ್ದ ‘ಶೆಹಜಾದಾ’, ‘ಸತ್ಯ ಪ್ರೇಮ್​ ಕಿ ಕಥಾ’ ಸಿನಿಮಾಗಳು ಬಿಡುಗಡೆ ಆದವು. ಇದೀಗ ಕಾರ್ತಿಕ್ ‘ಚಂದು ಚಾಂಪಿಯನ್’ ಸಿನಿಮಾದಲ್ಲಿ ನಟಿಸಿದ್ದು ಶೀಘ್ರವೇ ಈ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬೆನ್ನಲ್ಲೆ ‘ಬೂಲ್ ಭುಲಯ್ಯ’ ಸಿನಿಮಾ ಸರಣಿಯ ಹೊಸ ಸಿನಿಮಾವನ್ನು ಸಹ ಕಾರ್ತಿಕ್ ಪ್ರಾರಂಭಿಸಲಿದ್ದು, ಈ ಸಿನಿಮಾದಲ್ಲಿ ‘ಅನಿಮಲ್’ ನಟಿ ತೃಪ್ತಿ ದಿಮ್ರಿ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Sat, 24 February 24