ಬಾಲಿವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ‘ಶೇರ್ಷಾ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ನಿಜ ಜೀವನದಲ್ಲೂ ಇವರು ಜೋಡಿ ಆಗಬೇಕು ಎಂದು ಫ್ಯಾನ್ಸ್ ಬಯಸಿದ್ದರು. ಅವರ ಆಸೆಯಂತೆಯೇ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗೆ ಮದುವೆಯಾದರು. ರಾಜಸ್ಥಾನದಲ್ಲಿ ವಿವಾಹ ಕಾರ್ಯಗಳನ್ನು ಮುಗಿಸಿಕೊಂಡು ಮುಂಬೈಗೆ ಬಂದಿರುವ ದಂಪತಿ ಕೆಲವು ವಿಶೇಷ ವ್ಯಕ್ತಿಗಳಿಗೆ ಸಿಹಿ ಹಂಚಿದ್ದಾರೆ. ಯಾರವರು? ಇಲ್ಲಿದೆ ವಿವರ..
ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಅದರಲ್ಲೂ ಲವ್, ಡೇಟಿಂಗ್, ಮದುವೆ ಮುಂತಾದ ವಿಚಾರಗಳ ಸುಳಿವು ಸಿಕ್ಕರಂತೂ 24 ಗಂಟೆಯೂ ಸೆಲೆಬ್ರಿಟಿಗಳ ಮೇಲೆ ಪಾಪರಾಜಿಗಳು ಕಣ್ಣಿಟ್ಟಿರುತ್ತಾರೆ. ಫೋಟೋ ಕ್ಲಿಕ್ಕಿಸಲು ಹಾತೊರೆಯುತ್ತಾರೆ. ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಮದುವೆ ವಿಚಾರದಲ್ಲೂ ಹಾಗೆಯೇ ಆಯಿತು. ಅವರು ಹೋದಲ್ಲಿ-ಬಂದಲ್ಲಿ ಪಾಪರಾಜಿಗಳು ಮುತ್ತಿಕೊಂಡಿದ್ದರು. ಈಗ ಅವರಿಗೆಲ್ಲ ಸ್ವೀಟ್ ಬಾಕ್ಸ್ ನೀಡಲಾಗಿದೆ.
ಇದನ್ನೂ ಓದಿ: Kiara Advani Wedding: ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿದ್ದಾರ್ಥ್-ಕಿಯಾರಾ ಅಡ್ವಾಣಿ
ಪಾಪರಾಜಿಗಳು ಹಿಂಬಾಲಿಸಿದಾಗ ಕೆಲವು ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಆದರೆ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಆ ರೀತಿ ಅಂದುಕೊಂಡಿಲ್ಲ. ಮದುವೆ ನಡೆದ ಹೋಟೆಲ್ನ ಹೊರಗೆ, ವಿಮಾನ ನಿಲ್ದಾಣದ ಆವರಣದಲ್ಲಿ ತಮಗಾಗಿ ಹಗಲು-ರಾತ್ರಿ ಕಾದು ಫೋಟೋ ತೆಗೆದ ಪಾಪರಾಜಿಗಳಿಗೆ ಸಿಹಿ ನೀಡುವ ಮೂಲಕ ಸಿದ್ದಾರ್ಥ್ ಮತ್ತು ಕಿಯಾರಾ ಧನ್ಯವಾದ ತಿಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಮದುವೆಯ ಸಂಭ್ರಮದಲ್ಲಿ ತಮ್ಮನ್ನು ನೆನಪಿಸಿಕೊಂಡಿದ್ದಕ್ಕಾಗಿ ಪಾಪರಾಜಿಗಳು ಧನ್ಯವಾದ ಅರ್ಪಿಸಿದ್ದಾರೆ. ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಿದ್ದಾರ್ಥ್ ಮತ್ತು ಕಿಯಾರಾ ಅವರ ಮದುವೆ ನಡೆಯಿತು. ಫೆಬ್ರವರಿ 9ರಂದು ಮುಂಬೈನಲ್ಲಿ ರಿಸೆಪ್ಷನ್ ಮಾಡಲಾಯಿತು. ಫೆಬ್ರವರಿ 12ರ ರಾತ್ರಿ 8 ಗಂಟೆಗೆ ಇನ್ನೊಂದು ರಿಸೆಪ್ಷನ್ ಏರ್ಪಡಿಸಲಾಗುತ್ತಿದೆ. ಜೂಹಿ ಚಾವ್ಲಾ, ಅನಿಲ್ ಕಪೂರ್, ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಪರಿಣೀತಿ ಚೋಪ್ರಾ, ವರುಣ್ ಧವನ್ ಮುಂತಾದವರು ಹಾಜರಿ ಹಾಕುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್
ಬಾಲಿವುಡ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ‘ಮಿಷನ್ ಮಜ್ನು’ ಸಿನಿಮಾದಿಂದ ಸಿದ್ದಾರ್ಥ್ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕಿಯಾರಾ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.