ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅನೇಕ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಜನಪ್ರಿಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಈ ಪ್ರಕರಣದಲ್ಲಿ ವಿಚಾರಣೆ ಮಾಡಲಾಗಿದೆ. ಇತ್ತೀಚೆಗೆ ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕರೆಸಿಕೊಂಡಿದ್ದರು. ಈ ಪ್ರಕರಣದ ಕಿಂಗ್ ಪಿನ್ ಸುಕೇಶ್ ಚಂದ್ರಶೇಖರ್ ಬಳಿಯಿಂದ ನೋರಾ ಅವರು ಕಾರು ಗಿಫ್ಟ್ ಆಗಿ ಪಡೆದಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಅಸಲಿಯತ್ತು ವಿಚಾರಣೆಯಿಂದ ಹೊರಬರಬೇಕಿದೆ.
ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ನೋರಾ ಮೇಲೂ ಅನುಮಾನ ಮೂಡಿದೆ. ನೋರಾ ಜತೆ ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನೋರಾ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಈ ಮಧ್ಯೆ ನೋರಾ ವಿರುದ್ಧ ಸ್ಫೋಟಕ ಆರೋಪ ಕೇಳಿ ಬಂದಿದೆ.
ಸುಕೇಶ್ ಪರ ವಕೀಲ ಅನಂತ್ ಮಲ್ಲಿಕ್ ವಾದ ಮಂಡಿಸುತ್ತಿದ್ದಾರೆ. ಅವರು ನೋರಾ ಬಗ್ಗೆ ಆರೋಪ ಒಂದನ್ನು ಮಾಡಿದ್ದಾರೆ. ನೋರಾ ಫತೇಹಿ ಅವರು ಸುಕೇಶ್ ಅವರಿಂದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಮಲಿಕ್ ಈಗ ಹೇಳಿಕೊಂಡಿದ್ದಾರೆ.
ಸುಕೇಶ್ ಅವರನ್ನು ಶನಿವಾರ ದೆಹಲಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ‘ನೋರಾಗೆ ನಾನು ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ. ನೀವೇಕೆ ಅವರನ್ನು ಪ್ರಶ್ನಿಸುವುದಿಲ್ಲ’ ಎಂದು ಕೇಳಿದ್ದಾರೆ. ಈ ಹೇಳಿಕೆಯಿಂದ ನಟಿಗೆ ಸಾಕಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸುಕೇಶ್ ಚಂದ್ರಶೇಖರ್ ವಿರುದ್ಧ ವಂಚನೆ ಆರೋಪ ಇದೆ. ಹೀಗಾಗಿ, ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ, ಜಾಕ್ವೆಲಿನ್ ಫರ್ನಾಂಡಿಸ್ಗೆ ಸಂಕಷ್ಟ