ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾಗೆ ಒಂದರ ಮೇಲೆ ಒಂದರಂತೆ ಹಿನ್ನಡೆ ಆಗುತ್ತಲೇ ಇದೆ. ಈ ಮೊದಲು ರಿಲೀಸ್ ಆಗಿದ್ದ ಟೀಸರ್ಗೆ ಎಲ್ಲ ಕಡೆಗಳಿಂದ ಟೀಕೆ ಬಂದಿತ್ತು. ಈಗ ಸಿನಿಮಾ ಮತ್ತೆ ಟೀಕೆಗೆ ಒಳಗಾಗಿದೆ. ಇಂದು (ಮಾರ್ಚ್ 30) ರಾಮ ನವಮಿ ಹಬ್ಬ. ಈ ವಿಶೇಷ ದಿನದಂದು ‘ಆದಿಪುರುಷ್’ (Adipurush Movie) ಟೀಂ ಹೊಸ ಪೋಸ್ಟರ್ ಹಂಚಿಕೊಂಡಿದೆ. ಇದಕ್ಕೆ ಎಲ್ಲ ಕಡೆಗಳಿಂದ ಟೀಕೆ ವ್ಯಕ್ತವಾಗಿದೆ. ಯಾವುದೋ ಇನ್ಸ್ಟಾಗ್ರಾಮ್ ಫಿಲ್ಟರ್ ಹಾಕಿ ಪೋಸ್ಟರ್ ಎಡಿಟ್ ಮಾಡಿದಂತಿದೆ ಎಂದು ಅನೇಕರು ಟ್ರೋಲ್ ಮಾಡಿದ್ದಾರೆ.
‘ಆದಿಪುರುಷ್’ ಸಿನಿಮಾ ಹಲವು ಕಾರಣದಿಂದ ನಿರೀಕ್ಷೆ ಸೃಷ್ಟಿ ಮಾಡಿತ್ತು. ಪ್ರಭಾಸ್ ಅವರು ರಾಮನ ಅವತಾರದಲ್ಲಿ ಕಾಣಿಸಿಕೊಂಡರೆ, ಕೃತಿ ಸನೋನ್ ಅವರು ಸೀತೆಯ ಅವತಾರ ತಾಳಿದ್ದಾರೆ. ಓಂ ರಾವತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನೂರಾರು ಕೋಟಿ ಸುರಿಯಲಾಗಿದೆ. ಗ್ರಾಫಿಕ್ಸ್ ಗಮನ ಸೆಳೆಯಲಿದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ ಆಗಿತ್ತು. ಆದರೆ, ಈ ನಿರೀಕ್ಷೆ ಸುಳ್ಳಾಯಿತು. ಕಳೆದ ವರ್ಷ ರಿಲೀಸ್ ಆದ ಟೀಸರ್ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ನುಚ್ಚು ನೂರು ಮಾಡಿತ್ತು. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂದು ವರದಿ ಆಗಿತ್ತು.
ಇದನ್ನೂ ಓದಿ: ‘ಆದಿಪುರುಷ್’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್ ಆದೇಶ
ಗ್ರಾಫಿಕ್ಸ್ನಲ್ಲಿ ಕೆಲ ಬದಲಾವಣೆ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ, ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ರಾಮ, ಲಕ್ಷ್ಮಣ ಹಾಗೂ ಸೀತೆ ನಿಂತಿದ್ದಾರೆ. ಹನುಮಂತ ಇವರಿಗೆ ನಮಿಸುತ್ತಿದ್ದಾನೆ. ಈ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಈ ಮೊದಲು ರಾಮಾಯಣದ ಕುರಿತು ಸಿದ್ಧಗೊಂಡ ಸೀರಿಯಲ್ಗಳಲ್ಲಿ ಇದೇ ಮಾದರಿಯ ಪೋಸ್ಟರ್ಗಳು ಇರುತ್ತಿದ್ದವು. ಇದನ್ನು ಪ್ರೇಕ್ಷಕರು ನೆನಪಿಸಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಹೊಸದೇನು ಇಲ್ಲ ಎನ್ನುತ್ತಿದ್ದಾರೆ. ಕೆಲವರು ಇದು ಯಾವ ಫಿಲ್ಟರ್ ಎಂದು ಕೇಳಿದ್ದಾರೆ.
ಇದನ್ನೂ ಓದಿ: Om Raut: ಮತ್ತೆ ಟ್ರೋಲ್ ಆದ ‘ಆದಿಪುರುಷ್’ ನಿರ್ದೇಶಕ ಓಂ ರಾವತ್; ಈ ಬಾರಿ ಫ್ಯಾನ್ಸ್ ಕೋಪಕ್ಕೆ ಕಾರಣ ಏನು?
‘ಆದಿಪುರುಷ್’ ಟೀಸರ್ ರಿಲೀಸ್ ಆದಾಗ ಪ್ರಭಾಸ್ ಅವರು ಸಿಟ್ಟಿನಲ್ಲಿ ‘ಓಂ ನನ್ನ ರೂಂಗೆ ಬನ್ನಿ’ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅನೇಕರು ಹೊಸ ಪೋಸ್ಟರ್ಗೆ ಅದೇ ಕಮೆಂಟ್ ಹಾಕಿದ್ದಾರೆ. ಈ ಬೆಳವಣಿಗೆಯಿಂದ ಚಿತ್ರಕ್ಕೆ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ.
ಆದಿಪುರುಷ್ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಇದೆ. ಈ ಚಿತ್ರವನ್ನು ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ಭುಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ