
ಬಾಲಿವುಡ್ ನಟ ಅಕ್ಷಯ್ ಖನ್ನಾ (Akshaye Khanna) ಅವರಿಗೆ ‘ಧುರಂಧರ್’ ಸಿನಿಮಾದಿಂದ ಏಕಾಏಕಿ ಅವಕಾಶ ಹೆಚ್ಚಾಯಿತು. ಒಮ್ಮೆಲೇ ಅವರ ಜನಪ್ರಿಯತೆ ಮುಗಿಲು ಮುಟ್ಟಿತು. ಇದರಿಂದಾಗಿ ಅವರ ಡಿಮ್ಯಾಂಡ್ ಜಾಸ್ತಿ ಆಗಿದೆ. 2ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು ಈಗ ಏಕಾಏಕಿ 20 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಬೇಕು ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ‘ದೃಶ್ಯಂ 3’ (Drishyam 3) ಸಿನಿಮಾದ ನಿರ್ಮಾಪಕರಿಗೆ ಕೋಪ ಬಂದಿದೆ. ಹಾಗಾಗಿ ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಅಹಲಾವತ್ (Jaideep Ahlawat) ಅವರಿಗೆ ಅವಕಾಶ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
‘ದೃಶ್ಯಂ ಎಂಬುದು ಬಹಳ ದೊಡ್ಡ ಬ್ರ್ಯಾಂಡ್. ಅಕ್ಷಯ್ ಖನ್ನಾ ಈ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದು ಮುಖ್ಯವಾಗುವುದೇ ಇಲ್ಲ. ಈಗ ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಬಂದಿದ್ದಾರೆ. ದೇವರ ದಯೆಯಿಂದ ಅಕ್ಷಯ್ ಖನ್ನಾ ಅವರಿಗಿಂದ ಉತ್ತಮವಾದ ನಟ ನಮಗೆ ಸಿಕ್ಕಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ಜೈದೀಪ್ ಅವರು ಅಕ್ಷಯ್ ಖನ್ನಾಗಿಂತ ಒಳ್ಳೆಯ ಮನುಷ್ಯ’ ಎಂದು ‘ದೃಶ್ಯಂ’ ಚಿತ್ರದ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ಹೇಳಿದ್ದಾರೆ.
ಅಕ್ಷಯ್ ಖನ್ನಾ ಅವರು ‘ದೃಶ್ಯಂ 2’ ಸಿನಿಮಾದಲ್ಲಿ ನಟಿಸಿದ್ದರು. ಈಗ ‘ದೃಶ್ಯಂ 3’ ಸೆಟ್ಟೇರುತ್ತಿದೆ. ಅಷ್ಟರಲ್ಲಾಗಲೇ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಮಾಡಿದ ರೆಹಮಾನ್ ಡಕಾಯಿತ್ ಪಾತ್ರ ಬಹಳ ಹೈಲೈಟ್ ಆಗಿದೆ. ಆದ್ದರಿಂದ ಅಕ್ಷಯ್ ಖನ್ನಾ ಅವರು ಮುಂದಿನ ಸಿನಿಮಾಗಳ ನಿರ್ಮಾಪಕರಿಂದ ಏಕಾಏಕಿ ದುಬಾರಿ ಸಂಭಾವನೆ ಕೇಳಲು ಶುರು ಮಾಡಿದ್ದಾರೆ.
ಸಂಭಾವನೆ ಮಾತ್ರವಲ್ಲದೇ ತಮ್ಮ ಲುಕ್ ಕೂಡ ಬದಲಾಗಬೇಕು ಎಂಬುದು ಅಕ್ಷಯ್ ಖನ್ನಾ ಅವರ ಡಿಮ್ಯಾಂಡ್. ಅದಕ್ಕೆ ‘ದೃಶ್ಯಂ 3’ ಸಿನಿಮಾದ ನಿರ್ದೇಶಕರು ಒಪ್ಪಿಕೊಂಡಿಲ್ಲ. ಯಾಕೆಂದರೆ, ‘ದೃಶ್ಯಂ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ಮಾಡಿದ್ದ ಪಾತ್ರವೇ ಈಗ ಮುಂದುವರಿಯಬೇಕಿತ್ತು. ‘ದೃಶ್ಯಂ 2’ ಚಿತ್ರದಲ್ಲಿ ವಿಗ್ ಇಲ್ಲದೇ ನಟಿಸಿದ್ದ ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ ಚಿತ್ರದಲ್ಲಿ ವಿಗ್ ಧರಿಸಿ ಕಾಣಿಸಿಕೊಂಡರೆ ಚೆನ್ನಾಗಿ ಇರುವುದಿಲ್ಲ ಎಂಬುದು ನಿರ್ದೇಶಕರ ವಾದ. ಈ ಕಾರಣಕ್ಕಾಗಿಯೂ ಭಿನ್ನಾಭಿಪ್ರಾಯ ಮೂಡಿತು.
ಇದನ್ನೂ ಓದಿ: 2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ
ಜೈದೀಪ್ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ‘ಪಾತಾಳ್ ಲೋಕ್’ ವೆಬ್ ಸರಣಿ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅಕ್ಷಯ್ ಖನ್ನಾ ಅವರಿಂದ ತೆರವಾದ ಪಾತ್ರವನ್ನು ಈಗ ಜೈದೀಪ್ ಮಾಡಬೇಕಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಸಿನಿಮಾ ತಂಡದಿಂದ ಹೊರನಡೆದಿದ್ದರ ಬಗ್ಗೆ ಅಕ್ಷಯ್ ಖನ್ನಾ ಅವರು ಪ್ರತಿಕ್ರಿಯೆ ನೀಡುವುದು ಇನ್ನೂ ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.