ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಕ್ಷಯ್ಗೆ ಶಾಕ್ ಕೊಟ್ಟ ನಿರ್ಮಾಪಕ
Akshay Khanna: ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಹೊಸ ದಾಖಲೆಯನ್ನೇ ಬಾಕ್ಸ್ ಆಫೀಸ್ನಲ್ಲಿ ಬರೆಯುವ ಸುಳಿವು ನೀಡಿದೆ ಸಿನಿಮಾ. ರಣ್ವೀರ್ ನಾಯಕನಾಗಿರುವ ಈ ಸಿನಿಮಾನಲ್ಲಿ ಅಕ್ಷಯ್ ಖನ್ನಾ ಪಾತ್ರ ಸಖತ್ ಮಿಂಚಿದೆ. ಆದರೆ ಇದೀಗ ಅಕ್ಷಯ್ ಖನ್ನ ವಿರುದ್ಧ ದಾವೆ ಹೂಡಿದ್ದಾರೆ ಮತ್ತೊಂದು ಸಿನಿಮಾದ ನಿರ್ಮಾಪಕ.

‘ಧುರಂಧರ್’ (Dhurandhar) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಸಿನಿಮಾ ಇದಾಗಿದ್ದರೂ ಸಹ ಸಿನಿಮಾನಲ್ಲಿ ಹೆಚ್ಚು ಗಮನ ಸೆಳೆದಿರುವುದು ನಟ ಅಕ್ಷಯ್ ಖನ್ನಾ. ಸಿನಿಮಾನಲ್ಲಿ ರಹಮಾನ್ ಡಕೈತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದು, ಅವರ ಡೈಲಾಗ್ಗಳು, ಅವರ ಎಂಟ್ರಿ, ಅವರ ಡ್ಯಾನ್ಸಿನ ರೀಲುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಸಿನಿಮಾ ನೋಡಿದವರೆಲ್ಲ ರಣ್ವೀರ್ ಸಿಂಗ್ಗಿಂತಲೂ ಹೆಚ್ಚಾಗಿ ಅಕ್ಷಯ್ ಖನ್ನಾ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಅಚಾನಕ್ ಯಶಸ್ಸು ಅಕ್ಷಯ್ ಖನ್ನಾಗೆ ಸಣ್ಣ ಅಹಂ ಮೂಡಿಸಿದ್ದು, ಇದೀಗ ನಿರ್ಮಾಪಕರೊಬ್ಬರು ಅಕ್ಷಯ್ ಖನ್ನಾಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ಅಕ್ಷಯ್ ಖನ್ನಾ, ‘ದೃಶ್ಯಂ 2’ ಹಿಂದಿ ಸಿನಿಮಾನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದ್ದು, ‘ದೃಶ್ಯಂ 3’ ಸಿನಿಮಾನಲ್ಲಿಯೂ ಅಕ್ಷಯ್ ಖನ್ನಾ ಅವರಿಗೆ ಮಹತ್ವದ ಪಾತ್ರವಿತ್ತು. ಆದರೆ ‘ಧುರಂಧರ್’ ಸಿನಿಮಾದ ಯಶಸ್ಸು ಮತ್ತು ತಮಗೆ ವೈಯಕ್ತಿಕವಾಗಿ ಆ ಸಿನಿಮಾದಿಂದ ಸಿಕ್ಕ ಯಶಸ್ಸಿನಿಂದಾಗಿ ಇದೀಗ ಅವರು ಹಠಾತ್ತನೆ ಸಂಭಾವನೆ ಹೆಚ್ಚಿಗೆ ಕೇಳುತ್ತಿದ್ದು, ಬೇಡಿಕೆಯಷ್ಟು ಸಂಭಾವನೆ ಕೊಡದಿದ್ದಲ್ಲಿ ‘ದೃಶ್ಯಂ 3’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು ನಟನ ವಿರುದ್ಧ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ
‘ದೃಶ್ಯಂ 3’ ನಿರ್ಮಾಪಕರು ಆರೋಪಿಸಿರುವಂತೆ, ‘ದೃಶ್ಯಂ 3’ ಸಿನಿಮಾಕ್ಕೆ ಈಗಾಗಲೇ ಅಕ್ಷಯ್ ಅವರಿಗೆ ಅಡ್ವಾನ್ಸ್ ಹಣ ನೀಡಲಾಗಿದೆಯಂತೆ. ‘ದೃಶ್ಯಂ 2’ಗೆ ಅವರಿಗೆ ನೀಡಿದ ಮೊತ್ತಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನೇ ನಿಗದಿ ಪಡಿಸಲಾಗಿದೆಯಂತೆ. ಅವರು ಸಿನಿಮಾನಲ್ಲಿ ತಮ್ಮ ಲುಕ್ ಬದಲಿಸುವಂತೆ ಬೇಡಿಕೆ ಇರಿಸಿದ್ದರಂತೆ ಆದರೆ ಅದಕ್ಕೆ ನಿರ್ದೇಶಕರು ಒಪ್ಪಿರಲಿಲ್ಲ. ಆದರೆ ‘ಧುರಂಧರ್’ ಸಿನಿಮಾ ಬಿಡುಗಡೆಗೆ ಮುಂಚಿನಿಂದಲೂ ಅಕ್ಷಯ್ ಖನ್ನಾ ನಿರ್ಮಾಪಕರು, ನಿರ್ದೇಶಕರುಗಳ ಕರೆ ಸ್ವೀಕರಿಸುತ್ತಿಲ್ಲವಂತೆ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು, ಅಕ್ಷಯ್ ಖನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ಅಕ್ಷಯ್ ಖನ್ನ ಅವರು ‘ದೃಶ್ಯಂ 2’ನಲ್ಲಿ ಐಜಿ ತರುಣ್ ಅಹ್ಲಾವತ್ ಅವರ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಖ್ಯಾತ ನಟ ಜಯದೀಪ್ ಅಲ್ಹಾವತ್ ಅವರನ್ನು ಕರೆತರಲಾಗಿದೆ. ಸಿನಿಮಾದ ಚಿತ್ರೀಕರಣ ಜನವರಿ ತಿಂಗಳಿಂದ ಶುರುವಾಗಲಿದೆ. ಮಲಯಾಳಂ ಸಿನಿಮಾನಲ್ಲಿಯೂ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಲಯಾಳಂ ‘ದೃಶ್ಯಂ 3’ ಮತ್ತು ಹಿಂದಿಯ ‘ದೃಶ್ಯಂ 3’ ಸಿನಿಮಾಗಳು ಒಂದೇ ಸಮಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




