‘ಅಕ್ಷಯ್ ಖನ್ನಾಗೆ ಯಶಸ್ಸು ತಲೆಗೇರಿದೆ’; ದೊಡ್ಡ ನಿರ್ಧಾರ ತೆಗೆದುಕೊಂಡ ನಿರ್ಮಾಪಕ
ಸಂಭಾವನೆ ವಿವಾದ ಮತ್ತು ವಿಗ್ ಹಠದಿಂದ ಅಕ್ಷಯ್ ಖನ್ನಾ 'ದೃಶ್ಯಂ 3' ಚಿತ್ರದಿಂದ ಹೊರನಡೆದಿದ್ದಾರೆ. ನಿರ್ಮಾಪಕ ಕುಮಾರ್ ಮಂಗತ್, ಅಕ್ಷಯ್ ಅವರ ವೃತ್ತಿಪರತೆ ಇಲ್ಲದ ನಡವಳಿಕೆ ಮತ್ತು ಯಶಸ್ಸು ತಲೆಗೇರಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯಿಂದಾಗಿ, ನಿರ್ಮಾಪಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.

‘ಧುರಂಧರ್’ ಚಿತ್ರದ ಮೂಲಕ ಅಕ್ಷಯ್ ಖನ್ನಾ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಈ ಯಶಸ್ಸಿನ ಬಳಿಕ ‘ದೃಶ್ಯಂ 3’ ಸಿನಿಮಾದಿಂದ ಹೊರ ನಡೆದಿದ್ದಾಗಿ ವರದಿ ಆಗಿತ್ತು. ಅಕ್ಷಯ್ ಖನ್ನಾ ಹಾಗೂ ನಿರ್ಮಾಪಕರ ನಡುವೆ ಸಂಭಾವನೆ ವಿಷಯಕ್ಕೆ ಕಿರಿಕ್ ಉಂಟಾಗಿದೆ. ಹೀಗಾಗಿ, ಅಕ್ಷಯ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈಗ ‘ದೃಶ್ಯಂ 3’ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ಅಕ್ಷಯ್ ಖನ್ನಾ ಬಗ್ಗೆ ಮಾತನಾಡಿದ್ದಾರೆ. ಅವರು ಈಗ ಒಂದು ದೊಡ್ಡ ನಿರ್ಧಾರ ಕೂಡ ತೆಗೆದುಕೊಂಡಿದ್ದಾರೆ.
ಹಲವು ಸುತ್ತಿನ ಮಾತುಕತೆ ನಂತರದಲ್ಲಿ ನಿರ್ಮಾಪಕರು ಅಕ್ಷಯ್ ಖನ್ನಾ ಸಂಭಾವನೆ ಫಿಕ್ಸ್ ಮಾಡಿದ್ದರು. ‘ದೃಶ್ಯಂ 2’ ಸಿನಿಮಾದಲ್ಲಿ ಅವರಿಗೆ ವಿಗ್ ಇರಲಿಲ್ಲ. ಆದರೆ, ಈ ಚಿತ್ರದಲ್ಲಿ ಅವರು ವಿಗ್ ಬೇಕು ಎಂದು ಹಠ ಹಿಡಿದಿದ್ದರಂತೆ. ಇದು ಸೀಕ್ವೆಲ್ ಆಗಿರುವುದರಿಂದ ಹಿಂದಿನ ಸಿನಿಮಾ ಪಾತ್ರಕ್ಕೂ ಇದಕ್ಕೂ ಹೊಂದಿಕೆ ಆಗುವುದಿಲ್ಲ ಎಂದು ಹೇಳಿದರೂ ಅಕ್ಷಯ್ ಖನ್ನಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಳಿಕ ಅಕ್ಷಯ್ ಸಿನಿಮಾದಿಂದ ಹೊರ ನಡೆಯುವ ನಿರ್ಧಾರ ಮಾಡಿದರು ಎನ್ನಲಾಗಿದೆ.
ಅಕ್ಷಯ್ ಖನ್ನಾಗೆ ವೃತ್ತಿಪರತೆ ಇಲ್ಲ ಎಂಬುದು ಕುಮಾರ್ ಮಂಗತ್ ಆರೋಪ ಆಗಿದೆ. ‘ಅಕ್ಷಯ್ ಏನೂ ಅಲ್ಲದಿದ್ದ ಒಂದು ಕಾಲವಿತ್ತು. ಆಗ ನಾನು ಅವರ ಜೊತೆ ಸೆಕ್ಷನ್ 375 (2019) ಸಿನಿಮಾ ಮಾಡಿದ್ದೆ. ವೃತ್ತಿಪರತೆ ಇಲ್ಲ, ಅವರ ಜೊತೆ ಸಿನಿಮಾ ಮಾಡಬೇಡಿ ಎಂದು ಅನೇಕರು ಹೇಳಿದರು. ಸೆಟ್ನಲ್ಲಿ ಅವರ ಎನರ್ಜಿ ಟಾಕ್ಸಿಕ್ ಎನಿಸುತ್ತಿತ್ತು. ಸೆಕ್ಷನ್ 375 ಅವರಿಗೆ ಮನ್ನಣೆ ನೀಡಿತು. ‘ದೃಶ್ಯಂ 2’ ಚಿತ್ರಕ್ಕೂ ನಾನು ಅವಕಾಶ ಕೊಟ್ಟೆ. ಆ ಚಿತ್ರದ ಬಳಿಕವೇ ಅವರಿಗೆ ದೊಡ್ಡ ಆಫರ್‌ಗಳು ಬಂದವು. ಅದಕ್ಕೂ ಮೊದಲು ಅವರು 3-4 ವರ್ಷ ಮನೆಯಲ್ಲೇ ಇರುತ್ತಿದ್ದರು’ ಎಂದಿದ್ದಾರೆ ಕುಮಾರ್ ಮಂಗತ್.
‘ಕೆಲವು ನಟರು ಹಲವು ಕಲಾವಿದರ ಜೊತೆ ಸಿನಿಮಾ ಮಾಡುತ್ತಾರೆ. ಆ ಸಿನಿಮಾ ಹಿಟ್ ಆದ ಬಳಿಕ ತಾವು ದೊಡ್ಡ ಸ್ಟಾರ್ ಎಂದು ಭಾವಿಸುತ್ತಾರೆ. ಅಕ್ಷಯ್ ಖನ್ನಾ ವಿಷಯದಲ್ಲೂ ಅದೇ ಆಗಿದೆ. ಅವರು ಈಗ ತಮ್ಮನ್ನು ತಾವು ಸೂಪರ್ ಸ್ಟಾರ್ ಎಂದು ಭಾವಿಸಿದ್ದಾರೆ. ಯಶಸ್ಸು ಅವರ ತಲೆಗೆ ಏರಿದೆ. ಧುರಂಧರ್ ಹಿಟ್ ಆಗಲು ಸಾಕಷ್ಟು ಕಾರಣ ಇದೆ’ ಎಂದು ಕುಮಾರ್ ಮಂಗತ್ ಹೇಳಿದ್ದಾರೆ.
ಇದನ್ನೂ ಓದಿ: 2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ
ಅಕ್ಷಯ್ ಖನ್ನಾ ಜಾಗಕ್ಕೆ ಜೈದೀಪ್ ಅವರನ್ನು ಆಯ್ಕೆ ಮಾಡುವ ದೊಡ್ಡ ನಿರ್ಧಾರವನ್ನು ನಿರ್ಮಾಪಕರು ಮಾಡಿದ್ದಾರೆ. ಇದನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




