
ನಟ ಶಾರುಖ್ ಖಾನ್ (Shah Rukh Khan) ಅವರು ಸದ್ಯ ‘ಪಠಾಣ್’ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕಾಟ ಹೆಚ್ಚಾಗಿದೆ. ಒಂದು ವರ್ಗದ ಜನರು ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಹಾಗಾಗಿ ‘ಪಠಾಣ್’ (Pathaan) ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಅಭಿಯಾನ ನಡೆಸಲಾಗುತ್ತಿದೆ. ಅಲ್ಲದೇ, ಈ ಸಿನಿಮಾದ ‘ಬೇಷರಂ ರಂಗ್..’ (Besharam Rang Song) ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಕ್ಕೂ ಕೆಲವರು ತಕರಾರು ತೆಗೆದಿದ್ದಾರೆ. ಇಂಥವರಿಗೆಲ್ಲ ಶಾರುಖ್ ಖಾನ್ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಗುರುವಾರ (ಡಿ.15) ಸಂಜೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ರಾಣಿ ಮುಖರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಹಾಜರಿ ಹಾಕಿದ್ದರು. ಈ ವೇದಿಕೆಯಲ್ಲಿ ಶಾರುಖ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಚಾರಗಳನ್ನು ಹಬ್ಬಿಸಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಸಂಕುಚಿತ ದೃಷ್ಟಿಕೋನದಿಂದ ಈ ರೀತಿ ಆಗುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾಗೆ ಮಹತ್ವದ ಪಾತ್ರವಿದೆ’ ಎಂದು ಅವರು ಹೇಳಿದ್ದಾರೆ. ಎಲ್ಲಿಯೂ ಕೂಡ ಅವರು ‘ಪಠಾಣ್’ ಚಿತ್ರದ ಹೆಸರು ಎತ್ತಿಲ್ಲ. ಆದರೆ ಭಾಷಣ ಮುಗಿಸುವಾಗ ಅವರು ಹೇಳಿದ ಒಂದು ಮಾತು ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Prakash Raj: ‘ಬೇಷರಂ ರಂಗ್’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್ ರಾಜ್
‘ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
ಶಾರುಖ್ ಹೇಳಿದ ಈ ಮಾತುಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರನ್ನು ಉದ್ದೇಶಿಸಿಯೇ ಶಾರುಖ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
2023ರ ಜನವರಿ 25ರಂದು ‘ಪಠಾಣ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ. ವಿರೋಧದ ನಡುವೆಯೂ ಈ ಚಿತ್ರದ ‘ಬೇಷರಂ ರಂಗ್..’ ಹಾಡು ಧೂಳೆಬ್ಬಿಸುತ್ತಿದೆ. 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:16 am, Fri, 16 December 22