ರಾಮಾಯಣದ ಕಥೆ ಆಧರಿಸಿದ ‘ಆದಿಪುರುಷ್’ (Adipurush) ಸಿನಿಮಾದಿಂದ ಆಗುತ್ತಿರುವ ವಿವಾದಗಳು ಒಂದೆರಡಲ್ಲ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರವಿದೆ. ದೇವದತ್ತ ನಾಗೆ ಅವರು ಆಂಜನೇಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಡೀ ಸಿನಿಮಾದಲ್ಲಿ ಬಳಕೆ ಆಗಿರುವ ಭಾಷೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಅಲ್ಲದೇ ಒಟ್ಟಾರೆಯಾಗಿ ಈ ಚಿತ್ರದಲ್ಲಿ ರಾಮಾಯಣದ (Ramayana) ಕಥೆಯನ್ನು ಹಾಗೂ ಅದರ ಪಾತ್ರಗಳನ್ನು ಅಸಂಬದ್ಧವಾಗಿ ತೋರಿಸಲಾಗಿದೆ ಎಂಬ ಕಾರಣಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಶೀರ್ (Manoj Muntashir) ಅವರಿಗೆ ಕೆಲವರು ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ. ‘ಆದಿಪುರುಷ್’ ಸಿನಿಮಾಗೆ ಸಂಬಂಧಿಸಿದಂತೆ ಇಂಥ ಅನೇಕ ಘಟನೆಗಳು ನಡೆಯುತ್ತಿವೆ.
ಪೌರಾಣಿಕ ಕಥೆಗಳಲ್ಲಿ ಸಂಭಾಷಣೆಯ ಸ್ವರೂಪ ತುಂಬ ಭಿನ್ನವಾಗಿರುತ್ತದೆ. ಹಾದಿಬೀದಿಯಲ್ಲಿ ಜನರು ಮಾತನಾಡುವ ರೀತಿಯಲ್ಲಿ ರಾಮಾಯಣದ ಪಾತ್ರಗಳು ಮಾತನಾಡುವುದಿಲ್ಲ. ಆದರೆ ‘ಆದಿಪುರುಷ್’ ಸಿನಿಮಾದಲ್ಲಿ ಆಂಜನೇಯನ ಪಾತ್ರಕ್ಕೆ ಮನೋಜ್ ಮುಂತಶೀರ್ ಬರೆದ ಸಂಭಾಷಣೆಗಳು ತೀರಾ ಕಳಪೆ ಆಗಿವೆ ಎಂದು ಅನೇಕರು ದೂರಿದ್ದಾರೆ. ಅಲ್ಲದೇ ‘ನಾವು ರಾಮಾಯಣ ಆಧರಿಸಿ ಈ ಸಿನಿಮಾ ಮಾಡಿಲ್ಲ’ ಎಂದು ಮನೋಜ್ ಅವರು ಮಾತು ಬದಲಿಸಿದ್ದು ಕೂಡ ಜನರ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: Adipurush Collection: ಸೋಮವಾರ ಮುಗ್ಗರಿಸಿತು ‘ಆದಿಪುರುಷ್’ ಕಲೆಕ್ಷನ್; ನೆಗೆಟಿವ್ ವಿಮರ್ಶೆಗೆ ಪ್ರಭಾಸ್ ಸಿನಿಮಾ ತತ್ತರ
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕ್ಷತ್ರಿಯಾ ಕರ್ಣಿ ಸೇನಾದವರು ಸುದ್ದಿಗೋಷ್ಠಿ ನಡೆಸಿದ್ದರು. ‘ಆದಿಪುರುಷ್’ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಶೀರ್ ಹಾಗೂ ನಿರ್ದೇಶಕ ಓಂ ರಾವತ್ ಅವರನ್ನು ಕೊಲೆ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೋಜ್ ಮುಂತಶೀರ್ ಅವರು ಭದ್ರತೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡರು. ಹಾಗಾಗಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ. ಆಕ್ಷೇಪಾರ್ಹ ಎನಿಸಿದ ಡೈಲಾಗ್ಗಳನ್ನು ಬದಲಿಸಲು ಚಿತ್ರತಂಡ ಒಪ್ಪಿಕೊಂಡಿದೆ.
ಇದನ್ನೂ ಓದಿ: Adipurush: ‘ಬ್ರಾಹ್ಮಣನಾದ ರಾವಣ ಈ ಚಿತ್ರದಲ್ಲಿ ಮಾಂಸ ಮುಟ್ಟಿದ್ದು ತಪ್ಪು’: ‘ಆದಿಪುರುಷ್’ ಬ್ಯಾನ್ಗೆ ನೆಟ್ಟಿಗರ ಒತ್ತಾಯ
ದೇಶಾದ್ಯಂತ ‘ಆದಿಪುರುಷ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೂಡ ಕೆಲವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ನೇಪಾಳದಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ರಾಮಾಯಣವನ್ನು ಮನಬಂದಂತೆ ತೋರಿಸಿದ್ದು ಸರಿಯಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ದೃಶ್ಯಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.