‘ನಿಮಗೆ ನಾಚಿಕೆ ಆಗಬೇಕು’ ಕಾಂಗ್ರೆಸ್ ವಿರುದ್ಧ ಪ್ರೀತಿ ಝಿಂಟಾ ಗರಂ, ಸಿಟ್ಟಿಗೆ ಕಾರಣವೇನು?

|

Updated on: Feb 25, 2025 | 3:49 PM

Preity Zinta: ಖ್ಯಾತ ಬಾಲಿವುಡ್ ನಟಿ ಪ್ರೀತಿ ಝಿಂಟಾ ವಿವಾದಗಳಿಂದ ದೂರವೇ ಇದ್ದವರು. ಅವರು ಸಿನಿಮಾಗಳಲ್ಲಿ ನಟಿಸಿಯೇ ಬಹುಸಮಯವಾಗಿದೆ. ವಿದೇಶದಲ್ಲಿ ನೆಲೆಸಿರುವ ಪ್ರೀತಿ, ಭಾರತಕ್ಕೆ ಬರುವುದು ಅಪರೂಪ. ಆದರೆ ಇದೀಗ ಏಕಾ ಏಕಿ ನಟಿ ಪ್ರೀತಿ ಝಿಂಟಾ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ನಿಮಗೆ ನಾಚಿಕೆ ಆಗಬೇಕು’ ಎಂದು ಮೂದಲಿಸಿದ್ದಾರೆ. ನಟಿಯ ಸಿಟ್ಟಿಗೆ ಕಾರಣವೇನು?

‘ನಿಮಗೆ ನಾಚಿಕೆ ಆಗಬೇಕು’ ಕಾಂಗ್ರೆಸ್ ವಿರುದ್ಧ ಪ್ರೀತಿ ಝಿಂಟಾ ಗರಂ, ಸಿಟ್ಟಿಗೆ ಕಾರಣವೇನು?
Preity Zinta
Follow us on

ಸಿನಿಮಾ ಹಾಗೂ ರಾಜಕೀಯಕ್ಕೆ ಬಹಳ ಹತ್ತಿರದ ಸಂಬಂಧ. ಸಿನಿಮಾ ನಟ-ನಟಿಯರು ಹಾಗೂ ರಾಜಕಾರಣಿಗಳು ಬಹುತೇಕ ಗೆಳೆಯರಾಗಿಯೇ ಇರುತ್ತಾರೆ. ರಾಜಕಾರಣಿಗಳು ತಮಗೆ ಅವಶ್ಯಕತೆ ಬಂದಾಗಲೆಲ್ಲ ಸಿನಿಮಾ ಮಂದಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಸಿನಿಮಾ ಮಂದಿಯೂ ಸಹ ರಾಜಕಾರಣಿಗಳೊಟ್ಟಿಗೆ ಆಪ್ತ ಗೆಳೆತನ ಕಾಯ್ದಿಟ್ಟುಕೊಳ್ಳುತ್ತಾರೆ. ಆಡಳಿತ ಪಕ್ಷದ ಮುಖಂಡರನ್ನು ಬಹುವಾಗಿ ಹೊಗಳುವ ಹಲವು ನಟ-ನಟಿಯರು ಈಗಲೂ ಇದ್ದಾರೆ. ಯಾವುದೇ ರಾಜಕೀಯ ಪಕ್ಷಗಳು, ಮುಖಂಡರನ್ನು ಸಿನಿಮಾದವರು ಟೀಕೆ ಮಾಡುವುದು ಅಪರೂಪವೇ. ಆದರೆ ಇದೀಗ ನಟಿ ಪ್ರೀತಿ ಝಿಂಟಾ ಹಠಾತ್ತನೆ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾಯ್ದಿದ್ದಾರೆ.

ಕೇರಳ ಕಾಂಗ್ರೆಸ್​ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮಾಡಲಾದ ಟ್ವೀಟ್​ ನಟಿ ಪ್ರೀತಿ ಝಿಂಟಾ ಸಿಟ್ಟಿಗೆ ಕಾರಣವಾಗಿದೆ. ಕೇರಳ ಕಾಂಗ್ರೆಸ್ ಮಾಡಿರುವ ಟ್ವೀಟ್​ನಲ್ಲಿ ಪ್ರೀತಿ ಝಿಂಟಾ ಮಾಡಿದ್ದ 18 ಕೋಟಿ ಸಾಲವನ್ನು ಬಿಜೆಪಿ ಪಕ್ಷ ಮನ್ನಾ ಮಾಡಿದೆ, ಇದಕ್ಕಾಗಿ ಪ್ರೀತಿ ಝಿಂಟಾ, ಬಿಜೆಪಿಯ ಗುಣಗಾನ ಮಾಡುತ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿತ್ತು. ಕೇರಳ ಕಾಂಗ್ರೆಸ್​ನ ಈ ಟ್ವೀಟ್​ಗೆ ಪ್ರೀತಿ ಝಿಂಟಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ನ್ಯೂ ಇಂಡಿಯಾ ಕೋಪರೇಟಿವ್ ಬ್ಯಾಂಕ್​ನಲ್ಲಿ ಪ್ರೀತಿ ಮಾಡಿದ್ದ 18 ಕೋಟಿ ಸಾಲವನ್ನು ಮನ್ನಾ ಮಾಡಿದ್ದಕ್ಕೆ, ಪ್ರೀತಿ ಝಿಂಟಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಿಜೆಪಿ ಐಟಿ ಸೆಲ್​ ಸುಪರ್ಧಿಗೆ ಒಪ್ಪಿಸಿದ್ದಾರೆ. ಆದರೆ ನ್ಯೂ ಇಂಡಿಯಾ ಕೋಪರೇಟಿವ್ ಬ್ಯಾಂಕ್​ ನಲ್ಲಿ ಹಣ ಇಟ್ಟಿದ್ದ ಗ್ರಾಹಕರು ತಮ್ಮ ಹಣ ವಾಪಸ್ ಪಡೆಯಲು ಬೀದಿಯಲ್ಲಿ ಅಲೆಯುವಂತಾಗಿದೆ’ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಟ್ವೀಟ್​ನಲ್ಲಿ ಪ್ರೀತಿ ಝಿಂಟಾರ ಚಿತ್ರ, ವಿಡಿಯೋಗಳನ್ನು ಬಳಸಿಕೊಂಡಿತ್ತು.

ಇದನ್ನೂ ಓದಿ:ಪಂಜಾಬ್ ತಂಡಕ್ಕಾಗಿ 120 ಆಲೂ ಪರಾಟ ಮಾಡಿದ್ದ ಪ್ರೀತಿ ಝಿಂಟಾ, ಹೆಚ್ಚು ತಿಂದಿದ್ದು ಯಾರು?

ಕಾಂಗ್ರೆಸ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಪ್ರೀತಿ ಝಿಂಟಾ, ‘ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ನಾನೇ ನಿಭಾಯಿಸುತ್ತೇನೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವ ನಿಮಗೆ ನಾಚಿಕೆಯಾಗಬೇಕು, ಯಾರೂ ಸಹ ನಾನು ಮಾಡಿದ ಸಾಲವನ್ನು ಮನ್ನಾ ಮಾಡಿಲ್ಲ. 18 ಕೋಟಿ ಸಾಲವನ್ನು 10 ವರ್ಷದ ಹಿಂದೆಯೇ ತೀರಿಸಿದ್ದೇನೆ’ ಎಂದು ಪ್ರೀತಿ ಝಿಂಟಾ ಪ್ರತಿಕ್ರಿಯೆ ನೀಡಿದ್ದರು.

ಅದರ ಬಳಿಕ ಮತ್ತೆ ಟ್ವೀಟ್ ಮಾಡಿರುವ ಪ್ರೀತಿ ಝಿಂಟಾ, ‘ಬೇರೆ ಕೆಲ ನಟರಂತೆ ನಿಮ್ಮ ಖಾತೆಯನ್ನು ನಟೋರಿಯಸ್ ಐಟಿ ಸೆಲ್​ಗಳಿಗೆ ನೀಡದೇ ನೀವೇ ಆಪರೇಟ್ ಮಾಡುತ್ತಿರುವುದು ಕೇಳಿ ಸಂತೋಷವಾಯ್ತು. ಆದರೆ ನೀವು ಸೇರಿದಂತೆ ಹಲವು ಪ್ರಮುಖರ ಸಾಲ ಮನ್ನಾ ಮಾಡಿರುವ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಅದರ ಆಧಾರವಾಗಿಯೇ ನಾವು ಪೋಸ್ಟ್ ಹಂಚಿಕೊಂಡಿದ್ದೆವು. ಒಂದೊಮ್ಮೆ ನಮ್ಮಿಂದ ತಪ್ಪು ಆಗಿದ್ದಲ್ಲಿ ಅದನ್ನು ತಿದ್ದುಕೊಳ್ಳಲು ಸಿದ್ಧ ಇದ್ದೇವೆ’ ಎಂದಿದೆ ಕೇರಳ ಕಾಂಗ್ರೆಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ