‘ಛಾವಾ’ ಸಿನಿಮಾ ಮೇಲೆ 100 ಕೋಟಿ ರೂಪಾಯಿ ಕೇಸ್ ಬಿದ್ದ ಬಳಿಕ ಕ್ಷಮೆ ಕೇಳಿದ ನಿರ್ದೇಶಕ
ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿದೆ. ಆದರೆ, ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪದಿಂದಾಗಿ ವಿವಾದ ಉಂಟಾಗಿದೆ. ಗಾನೋಜಿ ಮತ್ತು ಕನ್ಹೋಜಿ ಶಿರ್ಕೆ ಕುಟುಂಬದವರು 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದರು. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಛತ್ರಪತಿ ಸಾಂಭಾಜಿ ಮಹರಾಜ್ ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವಾಗಲೇ ಸಿನಿಮಾ ಬಗ್ಗೆ ಅಪಸ್ವರ ಎದ್ದಿತ್ತು. ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎನ್ನುವ ಆರೋಪ ಎದುರಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿ ಈ ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಕ್ಷಮೆ ಕೇಳಿದ್ದಾರೆ.
ಮರಾಠಾ ಯೋಧರಾದ ಗಾನೋಜಿ ಮತ್ತು ಕನ್ಹೋಜಿ ಶಿರ್ಕೆ ಅವರ ವಂಶಸ್ಥರು ಸಿನಿಮಾ ಬಗ್ಗೆ ವಿರೋಧ ಹೊರಹಾಕಿದ್ದಾರೆ. ತಮ್ಮ ಪೂರ್ವಜರ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಈ ಬೆನ್ನಲ್ಲೇ ಲಕ್ಷ್ಮಣ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದ ಏನು?
ಛತ್ರಪತಿ ಸಂಭಾಜಿ ಮಹಾರಾಜರ ನಂಬಿಕಸ್ಥ ಮಿತ್ರರಾದ ಗಾನೋಜಿ ಮತ್ತು ಕನ್ಹೋಜಿ ಅವರು ಮೊಘಲ್ ಚಕ್ರವರ್ತಿ ಔರಂಗಜೇಬ್‌ನೊಂದಿಗೆ ಸೇರುವ ಮೂಲಕ ದ್ರೋಹವನ್ನು ಬಗೆಯುವ ರೀತಿಯಲ್ಲಿ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಮರಾಠಾ ದೊರೆಯ ಸಾವಿಗೆ ಕಾರಣವಾಗುತ್ತದೆ. ಇದು ಗಾನೋಜಿ ಮತ್ತು ಕನ್ಹೋಜಿ ವಂಶಸ್ಥರ ಕೋಪಕ್ಕೆ ಕಾರಣ ಆಗಿದೆ.
‘ನಮ್ಮ ಕುಟುಂಬದ ಪರಂಪರೆಗೆ ಇದು ದಕ್ಕೆ ಉಂಟು ಮಾಡುವ ರೀತಿಯಲ್ಲಿ ಇದೆ. ನಾವು ನಿರ್ದೇಶಕರಿಗೆ ನೋಟಿಸ್ ನೀಡಿದ್ದೇವೆ. ಅಲ್ಲದೆ, 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ಕನ್ಹೋಜಿ ಶಿರ್ಕೆ ವಂಶಸ್ಥರಾದ ಲಕ್ಷ್ಮಿಕಾಂತ್ ಶಿರ್ಕೆ ಅವರು ಸಿನಿಮಾ ರಿಲೀಸ್ ಆದ ಬಳಿಕ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ‘ಛಾವಾ’ ಪರಿಣಾಮ, ಭಾರತದಲ್ಲಿ ನೀರಸ ಪ್ರದರ್ಶನ ತೋರಿದ ಹಾಲಿವುಡ್ ಸಿನಿಮಾ
ಈಗ ವರದಿಗಳ ಪ್ರಕಾರ ಲಕ್ಷ್ಮಣ್ ಅವರು ಕನ್ಹೋಜಿ ಕುಟುಂಬದವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ‘ನಾವು ಗಾನೋಜಿ ಹಾಗೂ ಕನ್ಹೋಜಿ ಎಂಬ ಹೆಸರನ್ನು ಮಾತ್ರ ಬಳಕೆ ಮಾಡಿದ್ದೇವೆ. ಸರ್ನೇಮ್ನ ಎಲ್ಲಿಯೂ ಬಳಕೆ ಮಾಡಿಲ್ಲ. ಶಿರ್ಕೆ ಕುಟುಂಬದವರ ಭಾವನೆಗೆ ದಕ್ಕೆ ಉಂಟು ಮಾಡುವುದು ನಮ್ಮ ಉದ್ದೇಶ ಅಲ್ಲ’ ಎಂದಿದ್ದಾರೆ ಲಕ್ಷ್ಮಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.