‘ಛಾವಾ’ ಪರಿಣಾಮ, ಭಾರತದಲ್ಲಿ ನೀರಸ ಪ್ರದರ್ಶನ ತೋರಿದ ಹಾಲಿವುಡ್ ಸಿನಿಮಾ
Captain America: Brave New World: ಮಾರ್ವೆಲ್ ಸ್ಟುಡಿಯೋದ ಸಿನಿಮಾಗಳು ಭಾರತದ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿವೆ. ಕಳೆದ ಆರೇಳು ವರ್ಷಗಳಲ್ಲಿ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಕಲೆಕ್ಷನ್ ಅನ್ನು ಹೆಚ್ಚಿಸಿಕೊಂಡಿವೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಮಾರ್ವೆಲ್ ಸ್ಟುಡಿಯೋಸ್ನ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೀರಸ ಪ್ರದರ್ಶನ ತೋರುತ್ತಿದೆ.

ಮಾರ್ವೆಲ್ ಸ್ಟುಡಿಯೋದ ಸಿನಿಮಾಗಳು ಕಳೆದ ಐದಾರು ವರ್ಷಗಳಿಂದ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಕೆಲ ಲೆಕ್ಕಾಚಾರದಂತೆ ಏಷಿಯಾನಲ್ಲಿ ಹಾಲಿವುಡ್ ಸಿನಿಮಾಗಳು ಅತಿ ಹೆಚ್ಚು ಹಣ ಗಳಿಸುತ್ತಿರುವುದು ಭಾರತದಲ್ಲಿಯೇ. ‘ಅವೇಂಜರ್ಸ್’, ‘ಸ್ಪೈಡರ್ಮ್ಯಾನ್’ ಇನ್ನಿತರೆ ಕೆಲ ಸಿನಿಮಾಗಳು ಭಾರತದಲ್ಲಿ ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಸಿನಿಮಾ ಕೋವಿಡ್ ನಡುವೆ ಬಿಡುಗಡೆ ಆಗಿಯೂ ನೂರು ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ಆದರೆ ಇತ್ತೀಚೆಗೆ ಬಿಡುಗಡೆ ಆದ ಮಾರ್ವೆಲ್ನ ಸಿನಿಮಾ ಒಂದು ಅತ್ಯಂತ ನೀರಸ ಪ್ರದರ್ಶನ ತೋರುತ್ತಿದೆ. ಇದಕ್ಕೆ ಕಾರಣ ‘ಛಾವಾ’.
‘ಕ್ಯಾಪ್ಟನ್ ಅಮೆರಿಕ’ ಮಾರ್ವೆಲ್ನ ಸೂಪರ್ ಹೀರೋ ಯೂನಿವರ್ಸ್ನ ಅತ್ಯಂತ ಪ್ರಮುಖ ಸಿನಿಮಾ. ಈಗ ಬಿಡುಗಡೆ ಆಗಿರುವ ಸಿನಿಮಾ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳು ಕ್ಯಾಪ್ಟೆನ್ ಅಮೆರಿಕ ಸರಣಿಯಲ್ಲಿ ಬಿಡುಗಡೆ ಆಗಿವೆ. ಮೊದಲ ಮೂರು ಸಿನಿಮಾಗಳಲ್ಲಿ ಕ್ಯಾಪ್ಟನ್ ಅಮೆರಿಕ ಆಗಿ ಕ್ರಿಸ್ ಇವಾನ್ಸ್ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಆಂಥೊನಿ ಮ್ಯಾಕಿ ಕ್ಯಾಪ್ಟನ್ ಅಮೆರಿಕ ಆಗಿ ನಟಿಸಿದ್ದಾರೆ. ಇಷ್ಟು ವರ್ಷ, ಬಿಳಿಯ ವ್ಯಕ್ತಿಯನ್ನು ‘ಕ್ಯಾಪ್ಟನ್ ಅಮೆರಿಕ’ ಆಗಿ ತೋರಿಸಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಕಪ್ಪು ವರ್ಣೀಯ ವ್ಯಕ್ತಿಯನ್ನು ಕ್ಯಾಪ್ಟನ್ ಅಮೆರಿಕ ಆಗಿ ತೋರಿಸಲಾಗಿದೆ.
‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಸಿನಿಮಾ ಫೆಬ್ರವರಿ 14 ರಂದು ಅಮೆರಿಕ, ಭಾರತ ಸೇರಿ ವಿಶ್ವದ ಹಲವೆಡೆ ಬಿಡುಗಡೆ ಆಯ್ತು. ವಿಶ್ವದಾದ್ಯಂತ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ ಆದರೆ ಭಾರತದಲ್ಲಿ ಸಿನಿಮಾಕ್ಕೆ ಪ್ರಬಲ ಪ್ರತಿಸ್ಪರ್ಧೆ ಎದುರಾಗಿದೆ, ಸ್ಪರ್ಧೆ ನೀಡುತ್ತಿರುವುದು ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ. ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಸಿನಿಮಾ ಈ ವರೆಗೆ ಭಾರತದಲ್ಲಿ ಕೇವಲ 21 ಕೋಟಿ ರೂಪಾಯಿ ಹಣ ಗಳಿಸಿದೆ. ಈ ಹಿಂದಿನ ಮಾರ್ವೆಲ್ ಸಿನಿಮಾಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ.
ಇದನ್ನೂ ಓದಿ:‘ಛಾವಾ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ಪಟ್ಟ ಶ್ರಮಕ್ಕೆ ಸಾಕ್ಷಿ ಈ ವಿಡಿಯೋ
‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಇದೇ ಸಿನಿಮಾ ವಿಶ್ವದಾದ್ಯಂತ 1800 ಕೋಟಿ ಹೆಚ್ಚು ಮೊತ್ತವನ್ನು ಒಂದು ವಾರದಲ್ಲಿ ಗಳಿಕೆ ಮಾಡಿದೆ. ಆದರೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಮಾತ್ರ ತೆವಳುತ್ತಾ ಸಾಗಿದೆ. ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಭಾರತದಲ್ಲಿ ಬಿಡುಗಡೆ ಆದ ದಿನವೇ ‘ಛಾವಾ’ ಸಿನಿಮಾ ಸಹ ಬಿಡುಗಡೆ ಆಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಸಿನಿಮಾವನ್ನು ಹೆಚ್ಚಾಗಿ ನೋಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪೋಷಕರು, ವಿದ್ಯಾರ್ಥಿಗಳು, ಯುವಕರು, ವಯಸ್ಕರು ಯಾವುದೇ ಭೇದ ಭಾವ ಇಲ್ಲದೆ ‘ಛಾವಾ’ ಸಿನಿಮಾ ನೋಡುತ್ತಿರುವ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ಗಗನ ಮುಟ್ಟಿದ್ದು, ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಸಿನಿಮಾ ನೀರಸ ಪ್ರದರ್ಶನ ಕಾಣುತ್ತಿದೆ.
‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಒಂದು ರೀತಿ ಹೊಸ ಪ್ರಯೋಗ, ಅವೇಂಜರ್ಸ್ ಇನ್ನಿತರೆ ಸಿನಿಮಾಗಳಲ್ಲಿ ಆಂಥೊನಿ ಮ್ಯಾಕಿ ಫ್ಯಾಲ್ಕನ್ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಕೊನೆಯ ಅವೇಂಜರ್ಸ್ ಸಿನಿಮಾದ ಕತೆಯಂತೆ ಕ್ಯಾಪ್ಟನ್ ಅಮೆರಿಕ ನಿವೃತ್ತಿ ಪಡೆದು ತನ್ನ ಶೀಲ್ಡ್ (ಆಯುಧ) ಅನ್ನು ಆಂಥೊನಿ ಮ್ಯಾಕಿಗೆ ಕೊಟ್ಟ ಕಾರಣಕ್ಕೆ ಈಗ ಕಪ್ಪು ವರ್ಣೀಯನೊಬ್ಬ ಮೊದಲ ಬಾರಿಗೆ ಕ್ಯಾಪ್ಟನ್ ಅಮೆರಿಕ ಪಾತ್ರದಲ್ಲಿ ನಟಿಸುವಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ