ಮಲಯಾಳಂನ ಜನಪ್ರಿಯ ನಟಿಯ ಅವಮಾನಿಸಿದ ಬಾಲಿವುಡ್, ಕೆರಳಿದ ಕೇರಳಿಗರು

Param Sundari movie: ಜಾನ್ಹವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಪರಮ್ ಸುಂದರಿ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಕೇರಳದ ಸ್ಥಳೀಯತೆಗೆ ಆದ್ಯತೆ ನೀಡದೇ ಇರುವ ಬಗ್ಗೆ ಈಗಾಗಲೇ ಟೀಕೆಗೆ ಗುರಿಯಾಗಿದೆ. ಇದೀಗ ಸಿನಿಮಾನಲ್ಲಿ ಕೇರಳದ ಜನಪ್ರಿಯ ನಟಿಯೊಬ್ಬರಿಗೆ ಅವಮಾನ ಮಾಡಿರುವುದು ಕೇರಳಿಗರನ್ನು ಮತ್ತಷ್ಟು ಕೆರಳಿಸಿದೆ.

ಮಲಯಾಳಂನ ಜನಪ್ರಿಯ ನಟಿಯ ಅವಮಾನಿಸಿದ ಬಾಲಿವುಡ್, ಕೆರಳಿದ ಕೇರಳಿಗರು
Param Sundari

Updated on: Sep 03, 2025 | 12:55 PM

ಬಾಲಿವುಡ್ (Bollywood)​ ಮೊದಲಿನಿಂದಲೂ ದಕ್ಷಿಣ ಭಾರತದವರನ್ನು ತಮಾಷೆಯ ವಸ್ತುವಾಗಿಯೇ ಸಿನಿಮಾಗಳಲ್ಲಿ ತೋರಿಸುತ್ತಾ ಬಂದಿದೆ. ದಶಕಗಳ ಹಿಂದೆಯೂ ಇದು ಇತ್ತು ಈಗಲೂ ಮುಂದುವರೆದಿದೆ. ಇತ್ತೀಚೆಗೆ ಬಿಡುಗಡೆ ಆದ ‘ಪರಮ್ ಸುಂದರಿ’ ಹೆಸರಿನ ಬಾಲಿವುಡ್ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕೇರಳದ ಯುವತಿ ದೆಹಲಿಯ ಯುವಕನ ಜೊತೆಗೆ ಪ್ರೇಮದಲ್ಲಿ ಬೀಳುವ ಕತೆ. ಎಲ್ಲ ಬಾಲಿವುಡ್ ಮಸಾಲಾಗಳು ಇರುವ ಈ ಸಿನಿಮಾನಲ್ಲಿ ಸೂಕ್ಷ್ಮತೆ ಎಂಬುದು ಹುಡುಕಿದರೂ ಸಿಗದು ಎಂದು ವಿಮರ್ಶಕರು ಈಗಾಗಲೇ ಜಾಡಿಸಿದ್ದಾರೆ. ಆದರೆ ಇದರ ಜೊತೆಗೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿಗೆ ಅವಮಾನ ಮಾಡಿರುವುದನ್ನು ನೆಟ್ಟಿಗರು ಇದೀಗ ಗುರುತಿಸಿ ಬಾಲಿವುಡ್​ ಮೇಲೆ ಉರಿದು ಬಿದ್ದಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ‘ಒರು ಅಡಾರ್ ಲವ್’ ಸಿನಿಮಾದ ಸಣ್ಣ ಕಣ್ಮಿಟುಕಿಸುವ ಸೀನ್​​ನಿಂದ ರಾತ್ರೋರಾತ್ರಿ ಜನಪ್ರಿಯರಾದ ಪ್ರಿಯಾ ಪ್ರಕಾಶ್ ವಾರಿಯರ್ ಆ ಬಳಿಕ ಕನ್ನಡ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿಸಿದರು. ಪವನ್ ಕಲ್ಯಾಣ್, ತಮಿಳಿನ ಅಜಿತ್ ಅವರುಗಳೊಟ್ಟಿಗೂ ನಟಿಸಿದ್ದಾರೆ. ಬಾಲಿವುಡ್​​ಗೂ ಹೋಗಿ ಬಂದಿದ್ದಾರೆ. ಇದೀಗ ‘ಪರಮ್ ಸುಂದರಿ’ ಚಿತ್ರತಂಡ ಮಲಯಾಳಿಗರ ಮೆಚ್ಚಿನ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್​​ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಜಾನ್ಹವಿ ಕಪೂರ್​ ಗೆ ಸಿಕ್ಕಿತಾ ಗೆಲುವು ‘ಪರಮ ಸುಂದರಿ’ ಗಳಿಸಿದ್ದೆಷ್ಟು?

‘ಪರಮ್ ಸುಂದರಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ, ಸಿದ್ಧಾರ್ಥ್ ಮಲ್ಹೋತ್ರಾ ನಾಯಕ. ಈ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಸಹ ನಟಿಸಿದ್ದು, ಅವರು ಕಾಣಿಸಿಕೊಳ್ಳುವುದು ಕೇವಲ ಒಂದೇ ಒಂದು ಸೀನ್​​ನಲ್ಲಿ ಅದೂ ಪೋಷಕ ನಟಿಯಾಗಿಯೂ ಅಲ್ಲ ಬದಲಿಗೆ ಎಕ್ಸ್ಟ್ರಾ ಆಗಿ!

ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅವರು ‘ಪರಮ್ ಸುಂದರಿ’ ಸಿನಿಮಾನಲ್ಲಿ ಒಂದು ದೃಶ್ಯದಲ್ಲಿ ಒಂದು ಸೆಕೆಂಡ್​​ಗೆ ಮಾತ್ರ ಕಾಣಿಸಿಕೊಂಡು ಕಣ್ಮರೆ ಆಗುತ್ತಾರೆ. ಅವರ ಪಾತ್ರಕ್ಕೆ ಡೈಲಾಗ್ ಸಹ ಇಲ್ಲ. ಇತರೆ ಎಕ್ಸ್ಟ್ರಾ ನಟರುಗಳೊಟ್ಟಿಗೆ ಅವರು ನಿಂತಿರುತ್ತಾರೆ, ಮುಖ್ಯ ನಟ ಸಿದ್ಧಾರ್ಥ್ ಹಿಂದೆ ನಡೆದುಕೊಂಡು ಹೋಗುತ್ತಾರೆ ಅಷ್ಟೆ. ಸಿನಿಮಾದ ಪಾತ್ರ ಪರಿಚಯದಲ್ಲಿಯೂ ಸಹ ಪ್ರಿಯಾ ಪ್ರಕಾಶ್ ವಾರಿಯರ್ ಹೆಸರು ಇಲ್ಲ.

‘ಪರಮ್ ಸುಂದರಿ’, ಕೇರಳದ ಸ್ಥಳೀಯತೆಗೆ ಆದ್ಯತೆ ನೀಡಲಾಗಿತ್ತು ಎಂದು ಈಗಾಗಲೇ ಟೀಕೆ ಎದುರಿಸುತ್ತಿರುವ ಸಿನಿಮಾ ತಂಡ ಈಗ ಮಲಯಾಳಿಗರ ನೆಚ್ಚಿನ ನಟಿಯನ್ನು ಸಾಧಾರಣ ಎಕ್ಸ್​ಟ್ರಾ ನಟಿಯಾಗಿ ಹಾಕಿಕೊಂಡು ಅವಮಾನ ಮಾಡಿರುವುದು ಕೇರಳಿಗರ ಸಿಟ್ಟಿಗೆ ಕಾರಣವಾಗಿದೆ. ಪ್ರಿಯಾ ಪ್ರಕಾಶ್ ವಾರಿಯರ್, ಸಿನಿಮಾದ ನಟಿ ಜಾನ್ಹವಿಗಿಂತಲೂ ಒಳ್ಳೆಯ ನಟಿ ಮತ್ತು ಕೇರಳ ಯುವತಿಯ ಪಾತ್ರಕ್ಕೆ ಜಾನ್ಹವಿಗಿಂತಲೂ ಹೆಚ್ಚು ಸೂಟ್ ಆಗುವ ನಟಿ ಎಂದಿದ್ದಾರೆ ನೆಟ್ಟಿಗರು. ಇನ್ನು ಕೆಲವರು ಬಾಲಿವುಡ್ ತನ್ನ ಬುದ್ಧಿ ತೋರಿಸಿದೆ ಎಂದು ಬೈದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Wed, 3 September 25