ಸಿನಿಮಾ ಆಗಲಿದೆ ಶಿಲ್ಪಾ ಶೆಟ್ಟಿ ಪತಿಯ ‘ಅಶ್ಲೀಲ ವಿಡಿಯೋ ಕಾಂಡ’: ಹೋದ ಮಾನ ವಾಪಸ್ ಪಡೆಯುವ ಯತ್ನ?
Raj Kundra: ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಇದೀಗ ಅದೇ ಘಟನೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಸಿನಿಮಾಗಳನ್ನು ತಮ್ಮ ಇಮೇಜು ಸರಿಪಡಿಸಿಕೊಳ್ಳಲು ಬಳಸುವ ಪದ್ಧತಿಯೊಂದು ಬಾಲಿವುಡ್ನಲ್ಲಿ (Bollywood) ಆರಂಭವಾಗಿದೆ. ಸಂಜಯ್ ದತ್ (Sanjay Dutt) ಜೀವನ ಆಧರಿಸಿದ ‘ಸಂಜು’ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿ ಪ್ರಕರಣದಲ್ಲ ಜೈಲು ಪಾಲಾಗಿದ್ದ ಸಂಜಯ್ ದತ್, ಆ ಪ್ರಕರಣವನ್ನು ತಮ್ಮದೇ ಮೂಗಿನ ನೇರಕ್ಕೆ ರಾಜ್ಕುಮಾರ್ ಹಿರಾನಿ ಕೈಯಿಂದ ಸಿನಿಮಾ ಮಾಡಿಸಿದರು. ಜನಗಳ ದೃಷ್ಟಿಯಲ್ಲಿ ‘ಅಮಾಯಕ’ ಎನಿಸಿಕೊಂಡರು. ಇತ್ತೀಚೆಗೆ ಬಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ರ ‘ಮತ್ತೆ ಮದುವೆ’ ಸಿನಿಮಾ ಸಹ ಇದಕ್ಕೆ ಉದಾಹರಣೆ. ಇದೀಗ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಸಹ ಇದೇ ಹಾದಿ ಹಿಡಿದಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದಿಂದ ಹೋಗಿರುವ ಮಾನವನ್ನು ಸಿನಿಮಾ ಮಾಡಿ ವಾಪಸ್ ಗಳಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಅದೂ ಸಾಮಾನ್ಯ ಪ್ರಕರಣದಲ್ಲಲ್ಲ, ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ. ತನಿಖೆ ನಡೆಸಿದ್ದ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದರು. ಕೆಲವು ನಟಿಯರು ಬಹಿರಂಗವಾಗಿ ಕುಂದ್ರಾ ವಿರುದ್ಧ ಆರೋಪಗಳನ್ನೂ ಮಾಡಿದರು. ಇನ್ನು ಕೆಲವರು ತನಿಖಾಧಿಕಾರಿಗಳ ಬಳಿಕ ಹೇಳಿಕೆ ನೀಡಿದ್ದರು. 63 ದಿನಗಳ ಬಳಿಕ ಜಾಮೀನಿನ ಮೇಲೆ ಕುಂದ್ರಾ ಜೈಲಿನಿಂದ ಹೊರಬಂದರು. ಪ್ರಕರಣ ಈಗಲೂ ವಿಚಾರಣೆ ಹಂತದಲ್ಲಿದೆ. ಇದರ ನಡುವೆ ರಾಜ್ ಕುಂದ್ರಾ ತಮ್ಮದೇ ಪ್ರಕರಣವನ್ನು ಸಿನಿಮಾ ಆಗಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಅಶ್ಲೀಲ ವೀಡಿಯೋ ಹಂಚಿಕೆ ಪ್ರಕರಣ, ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸುಪ್ರೀಂ
ಅತಿ ಹೆಚ್ಚು ಖೈದಿಗಳುಳ್ಳ ಆರ್ಥರ್ ರೋಡ್ ಜೈಲಿನಲ್ಲಿ ಬರೋಬ್ಬರಿ 63 ದಿನಗಳನ್ನು ರಾಜ್ ಕುಂದ್ರಾ ಕಳೆದಿದ್ದರು. ಇದೀಗ ಅದೇ ವಿಷಯವನ್ನು ಆಧರಿಸಿ ಸಿನಿಮಾ ನಿರ್ಮಿಸಲು ರಾಜ್ ಕುಂದ್ರಾ ಮುಂದಾಗಿದ್ದು, ತಮ್ಮ ಪಾತ್ರದಲ್ಲಿ ಸ್ವತಃ ತಾವೇ ನಟಿಸಲಿದ್ದಾರಂತೆ. ರಾಜ್ ಕುಂದ್ರಾ ನಿರ್ಮಿಸಲು ಮುಂದಾಗಿರುವ ಈ ಸಿನಿಮಾವು ಕುಂದ್ರಾರ ಪ್ರಕರಣ, ಬಂಧನ, ಜೈಲು ವಾಸ ಅದರಿಂದ ಹೊರಬಂದ ಬಳಿಕ ಏನೇನಾಯ್ತು ಎಂಬ ವಿಷಯಗಳನ್ನು ಒಳಗೊಂಡಿರುತ್ತದೆ. ಜನಪ್ರಿಯ ನಿರ್ದೇಶಕರೊಟ್ಟಿಗೆ ಕೂತು ರಾಜ್ ಕುಂದ್ರಾ ಚಿತ್ರಕತೆಯನ್ನು ತಯಾರು ಮಾಡಿದ್ದು, ಅವರೇ ಸಿನಿಮಾವನ್ನು ನಿರ್ಮಿಸಿ, ನಟಿಸಲಿದ್ದಾರೆ.
2021ರ ಜುಲೈ 19ರಂದು ರಾಜ್ ಕುಂದ್ರಾ ಬಂಧನವಾಗಿತ್ತು. ಮುಂಬೈನಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿ ಅದನ್ನು ಲಂಡನ್ ಮೂಲದ ತಮ್ಮದೇ ಸಂಸ್ಥೆಯ ಮೂಲಕ ಹಾಟ್ಶಾಟ್ಸ್ ಹಾಗೂ ಇತರೆ ಕೆಲವು ಆಪ್ಗಳಿಗೆ ಅಪ್ಲೋಡ್ ಮಾಡಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಮುನ್ನ ಅಶ್ಲೀಲ ವಿಡಿಯೋ ನಿರ್ಮಾಣಗೊಳ್ಳುತ್ತಿದ್ದ ಸ್ಥಳದ ಮೇಲೆ ರೇಡ್ ಮಾಡಿ, ನಟಿ ಗೆಹನಾ ವಸಿಷ್ಠ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧಾರದಲ್ಲಿಯೇ ತನಿಖೆ ನಡೆಸಿ ಸಾಕ್ಷ್ಯಗಳನ್ನು ಕ್ರೂಡೀಕರಿಸಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು.
ಜೈಲಿನಿಂದ ಹೊರಬಂದ ಬಳಿಕ ಪೂರ್ಣ ಮುಖಮುಚ್ಚುವಂತೆ ಮಾಸ್ಕ್ಗಳನ್ನು ಧರಿಸಿಯೇ ರಾಜ್ ಕುಂದ್ರಾ ಓಡಾಡುತ್ತಿದ್ದಾರೆ. ತಮ್ಮ ಚಿತ್ರಗಳು ಎಲ್ಲಿಯೂ ಕಾಣದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಒಮ್ಮೆಲೆ ಸಿನಿಮಾದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ