
ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ ಸಲ್ಮಾನ್ ಖಾನ್ ಅನ್ನು ದಶಕಗಳಿಂದಲೂ ಬೆನ್ನು ಬಿದ್ದಿವೆ. ಸಲ್ಮಾನ್ ಖಾನ್ ಸಹ ಕಾನೂನಿನ ಸಿಕ್ಕುಗಳನ್ನು ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಂಡೆ ಬರುತ್ತಿದ್ದಾರೆ. ಅಪಘಾತ ಪ್ರಕರಣದಲ್ಲಂತೂ ಸಲ್ಮಾನ್ ಖಾನ್ ವಿರುದ್ಧ ಪ್ರಕರಣವನ್ನೇ ಕೈಬಿಡಲಾಗಿದೆ. ಆದರೆ ಕೃಷ್ಣಮೃಗ ಪ್ರಕರಣ ಸಲ್ಮಾನ್ ಖಾನ್ ಅನ್ನು ಜೈಲಿಗೆ ಕಳಿಸಿಯೇ ತೀರುವಂತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಪ್ರಕರಣದ ವಿಚಾರಣೆ ಇದೆ.
ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ 2018ರಲ್ಲಿಯೇ ಸಲ್ಮಾನ್ ಖಾನ್ ದೋಷಿ ಎಂದು ರಾಜಸ್ಥಾನದ ಟ್ರಯಲ್ ಕೋರ್ಟ್ ತೀರ್ಪು ನೀಡಿದೆ. ಅದೇ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿದ್ದ ಸೈಫ್ ಅಲಿ ಖಾನ್, ನಟಿಯರಾದ ಟಬು, ಸೊನಾಲಿ ಬೇಂದ್ರೆ, ನೀಲಂ ಸ್ಥಳೀಯ ವ್ಯಕ್ತಿಯಾಗಿದ್ದ ದುಶ್ಯಂತ್ ಸಿಂಗ್ ಪ್ರಕರಣದಿಂದ ಮುಕ್ತಿಯನ್ನು ಸಹ ನೀಡಿದೆ. ಆ ಬಳಿಕ ಸಲ್ಮಾನ್ ಖಾನ್, ತಮಗೆ ವಿಧಿಸಲಾಗಿರುವ ಐದು ವರ್ಷದ ಸಜೆಯನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಗೆ ರಾಜಸ್ಥಾನ ಹೈಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಸೆಪ್ಟೆಂಬರ್ 22 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಈ ನಟಿ ಜೊತೆ ಕದ್ದು ಮುಚ್ಚಿ ಓಡಾಡಿದ್ದ ಸಲ್ಮಾನ್ ಖಾನ್?
1998 ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅದೇ ವರ್ಷ ಸಲ್ಮಾನ್ ಖಾನ್ ಬಂಧನವಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಸಹ ಮಾಡಲಾಯ್ತು. ಅದಾದ ಬಳಿಕ 2006 ರಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ ಐದು ವರ್ಷದ ಶಿಕ್ಷೆ ನೀಡಿತು. ಆದರೆ ಸಲ್ಮಾನ್ ಖಾನ್ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರು. ರಾಜಸ್ಥಾನ ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿತು. ಬಳಿಕ ಜೋಧ್ಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು 2018 ರಲ್ಲಿ ಸಲ್ಮಾನ್ ಖಾನ್ಗೆ ಮತ್ತು ಐದು ವರ್ಷ ಸಜೆ ಘೋಷಿಸಲಾಯ್ತು. ಅದೇ ವರ್ಷ ಜೋಧ್ಪುರ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ಗೆ ಜಾಮೀನು ಸಹ ಸಿಕ್ಕಿತು. ಬಳಿಕ ಮತ್ತೊಮ್ಮೆ ಸಲ್ಮಾನ್ ಖಾನ್, ತಮಗೆ ವಿಧಿಸಲಾಗಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ರಾಜಸ್ಥಾನ ಹೈಕೋರ್ಟ್ನಲ್ಲಿ ಸೆಪ್ಟೆಂಬರ್ 22 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಕೃಷ್ಣಮೃಗವು ಬಿಷ್ಣೋಯಿ ಸಮುದಾಯದ ಆರಾಧ್ಯ ದೈವವಾಗಿದ್ದು, ಸಲ್ಮಾನ್ ಖಾನ್ ವಿರುದ್ಧ ಈ ಪ್ರಕರಣದಲ್ಲಿ ಬಿಷ್ಣೋಯಿ ಸಮುದಾಯ ಹೋರಾಡುತ್ತಿದೆ. ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಪ್ರತಿಜ್ಞೆ ಮಾಡಿದ್ದು, ಈಗಾಗಲೇ ಕೆಲವು ಬಾರಿ ಸಲ್ಮಾನ್ ಖಾನ್ ವಿರುದ್ಧ ಹತ್ಯಾ ಪ್ರಯತ್ನವನ್ನೂ ಮಾಡಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:24 am, Thu, 31 July 25