ಜನಪ್ರಿಯ ನಟ ಶಾರುಖ್ ಖಾನ್ (Shah Rukh Khan) ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಅವರು ಇಂದು ಜಗತ್ತಿನ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ಏಳು-ಬೀಳುಗಳನ್ನು ಕಂಡರೂ ಶಾರುಖ್ ಖಾನ್ ಕುಗ್ಗಿಲ್ಲ. ಅವರನ್ನು ಮಾದರಿಯಾಗಿ ಇಟ್ಟುಕೊಂಡ ಅನೇಕ ನಟರಿದ್ದಾರೆ. ಬಾಲಿವುಡ್ ಕಲಾವಿದ ರಾಜ್ಕುಮಾರ್ ರಾವ್ (Rajkummar Rao) ಅವರಿಗೂ ಶಾರುಖ್ ಖಾನ್ ಸ್ಫೂರ್ತಿ. ತಮ್ಮ ನೆಚ್ಚಿನ ನಟನ ಮಾತಿನಿಂದ ಪ್ರೇರಿತರಾದ ಅವರು 44 ಕೋಟಿ ರೂಪಾಯಿಯ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಅದು ಕೂಡ ಶ್ರೀದೇವಿ ಮಗಳು ಜಾನ್ವಿ ಕಪೂರ್ಗೆ (Janhvi Kapoor) ಸೇರಿದ್ದ ಮನೆ ಎಂಬುದು ವಿಶೇಷ.
ಜಾನ್ವಿ ಕಪೂರ್ ಅವರು 2020ರ ಡಿಸೆಂಬರ್ನಲ್ಲಿ ಮುಂಬೈನಲ್ಲಿ ಒಂದು ಮನೆಯಲ್ಲಿ 39 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಅದನ್ನು 2022ರಲ್ಲಿ ರಾಜ್ಕುಮಾರ್ ರಾವ್ ಅವರು 44 ಕೋಟಿ ರೂಪಾಯಿಗೆ ಕೊಂಡುಕೊಂಡರು. ಶಾರುಖ್ ಖಾನ್ ಅವರು ಈ ಮೊದಲು ಹೇಳಿದ್ದ ಒಂದು ಮಾತನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ರಾಜ್ಕುಮಾರ್ ರಾವ್ ಅವರು ಈ ಮನೆ ಖರೀದಿ ಮಾಡಿದ್ದಾಗಿ ಈಗ ಹೇಳಿದ್ದಾರೆ.
ರಾಜ್ಕುಮಾರ್ ನಟನೆಯ ‘ಶ್ರೀಕಾಂತ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮನೆ ಖರೀದಿ ಬಗ್ಗೆ ಮಾತನಾಡಿದ್ದಾರೆ. ‘ಶಾರುಖ್ ಖಾನ್ ಅವರು ಒಂದು ವಿಷಯ ಹೇಳಿಕೊಟ್ಟಿದ್ದಾರೆ. ಮನೆ ಖರೀದಿ ಮಾಡುವಾಗ ನಿನ್ನ ಸಾಮರ್ಥ್ಯಕ್ಕಿಂತಲೂ ಮಿಗಿಲಾದ ಮನೆ ಖರೀದಿಸು. ಅದನ್ನು ಪಡೆಯಲು ನೀನು ಹೆಚ್ಚು ಶ್ರಮಪಡುತ್ತೀಯ ಅಂತ ಶಾರುಖ್ ಹೇಳಿದ್ದರು. ಆ ಮಾತು ನನಗೆ ತುಂಬ ಇಷ್ಟವಾಯಿತು’ ಎಂದಿದ್ದಾರೆ ರಾಜ್ಕುಮಾರ್ ರಾವ್.
ಇದನ್ನೂ ಓದಿ: ಮುಂದಿನ ಸಿನಿಮಾದ ಶೂಟಿಂಗ್ ಬಗ್ಗೆ ಅಪ್ಡೇಟ್ ನೀಡಿದ ನಟ ಶಾರುಖ್ ಖಾನ್
‘ಮುಂಬೈ ನಗರದಲ್ಲಿ ಒಂದು ಮನೆ ಮಾಡುವುದು ನಿಜಕ್ಕೂ ಕನಸು. ನಾನು ಮತ್ತು ಪತ್ರಲೇಖ (ಪತ್ನಿ) ಅದನ್ನು ಕನಸಿನಿಂದ ಕಟ್ಟಿದ್ದೇವೆ’ ಎಂದು ರಾಜ್ಕುಮಾರ್ ರಾವ್ ಹೇಳಿದ್ದಾರೆ. ಅವರು ನಟಿಸಿರುವ ‘ಶ್ರೀಕಾಂತ್’ ಸಿನಿಮಾ ಮೇ 10ಕ್ಕೆ ಬಿಡುಗಡೆ ಆಗುತ್ತಿದೆ. ಇದಲ್ಲದೇ ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಸ್ತ್ರೀ 2’, ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.