‘ರಾಮಾಯಣ’ ಚಿತ್ರಕ್ಕಾಗಿ ಸಸ್ಯಾಹಾರಿಯಾಗಿದ್ದ ರಣಬೀರ್ ಕಪೂರ್: ಸೀಕ್ರೆಟ್ ಬಿಚ್ಚಿಟ್ಟ ಸಹ ನಟಿ

2011ರ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರು ತಾವು ‘ಬೀಫ್ ಪ್ರಿಯ’ ಎಂದು ಹೇಳಿಕೆ ನೀಡಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ಅವರು ಆಯ್ಕೆ ಆದಾಗ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆದರೆ ಶೂಟಿಂಗ್ ವೇಳೆ ರಣಬೀರ್ ಕಪೂರ್ ಅವರು ಸಂಪೂರ್ಣ ಸಸ್ಯಾಹಾರಿ ಆಗಿದ್ದರು.

‘ರಾಮಾಯಣ’ ಚಿತ್ರಕ್ಕಾಗಿ ಸಸ್ಯಾಹಾರಿಯಾಗಿದ್ದ ರಣಬೀರ್ ಕಪೂರ್: ಸೀಕ್ರೆಟ್ ಬಿಚ್ಚಿಟ್ಟ ಸಹ ನಟಿ
Ranbir Kapoor

Updated on: Nov 12, 2026 | 2:43 PM

ಬಾಲಿವುಡ್ ನಟ ರಣಬೀರ್ ಕಪೂರ್ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರ ಆರಂಭ ಆದಾಗಿನಿಂದಲೂ ರಣಬೀರ್ ಆಯ್ಕೆಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಸಿನಿಮಾ ಬಿಡುಗಡೆಯಾದ ನಂತರ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇದೀಗ ಚಿತ್ರದಲ್ಲಿ ರಣಬೀರ್ ಅವರ ತಾಯಿ ಕೌಸಲ್ಯೆಯ ಪಾತ್ರದಲ್ಲಿ ನಟಿಸಿರುವ ಇಂದಿರಾ ಕೃಷ್ಣನ್ ಅವರು ಶ್ರೀರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ‘ಫಿಲ್ಮಿಜ್ಞಾನ್’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಇಂದಿರಾ ಕೃಷ್ಣನ್, ತೆರೆಯ ಮೇಲಷ್ಟೇ ಅಲ್ಲದೆ ತೆರೆಯ ಹಿಂದೆಯೂ ರಣಬೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ‘ಅನಿಮಲ್’ ಚಿತ್ರದಲ್ಲೂ ಅವರಿಬ್ಬರು ಒಟ್ಟಿಗೆ ನಟಿಸಿದ್ದರು. ‘ರಾಮಾಯಣ’ ಚಿತ್ರೀಕರಣದ ಸಮಯದಲ್ಲಿ ತಮ್ಮ ಎದುರು ರಣಬೀರ್ ಬದಲಾಗಿ ಸಾಕ್ಷಾತ್ ಶ್ರೀರಾಮನೇ ನಿಂತಿರುವಂತೆ ಭಾಸವಾಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ರಣಬೀರ್ ಅವರು ತಮ್ಮ ದೊಡ್ಡ ಬೆಂಬಲಿಗರಾಗಿದ್ದು, ಪ್ರತಿ ದೃಶ್ಯದ ನಂತರವೂ ತಮ್ಮ ಅಭಿಪ್ರಾಯ ಕೇಳುತ್ತಿದ್ದರು ಎಂದು ಸ್ಮರಿಸಿದ್ದಾರೆ.

Loading...

ಶ್ರೀರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯನ್ನು ವಿರೋಧಿಸಿದವರ ಕುರಿತು ಮಾತನಾಡಿದ ಇಂದಿರಾ, ‘ಯಾರಾದರೂ ಬೆಳೆಯುತ್ತಿದ್ದರೆ ಮತ್ತು ಹೊಸ ಬಗೆಯ ಪಾತ್ರವನ್ನು ಪ್ರಯತ್ನಿಸುತ್ತಿದ್ದರೆ ಅವರನ್ನು ಕೆಳಗೆ ಎಳೆಯುವ ಮತ್ತು ಟ್ರೋಲ್ ಮಾಡುವ ಮನಸ್ಥಿತಿ ನಮ್ಮಲ್ಲಿದೆ. ರಣಬೀರ್ ಶ್ರೀರಾಮನ ಪಾತ್ರ ಮಾಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗದ ಜನರನ್ನೂ ನಾನು ಭೇಟಿಯಾಗಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ರಣಬೀರ್ ಅವರ ಶಿಸ್ತು ಮತ್ತು ಆಹಾರ ಪದ್ಧತಿಯ ಬಗ್ಗೆ ವಿವರಿಸಿದ ಇಂದಿರಾ ಕೃಷ್ಣನ್, ‘ಈ ಇಡೀ ಸಿನಿಮಾದ ಪ್ರಕ್ರಿಯೆಯಲ್ಲಿ ಅವರು ಸಂಪೂರ್ಣ ಸಸ್ಯಾಹಾರಿಯಾಗಿದ್ದರು. ಅವರು ಕೇವಲ ಹಣ್ಣುಗಳನ್ನು ತಿನ್ನುತ್ತಿದ್ದರು ಮತ್ತು ದಕ್ಷಿಣ ಭಾರತದ ಆಹಾರ ತಿನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ಬೆಳಿಗ್ಗೆ 3 ಗಂಟೆ ಮತ್ತು ಸಂಜೆ 2-3 ಗಂಟೆಗಳ ಕಾಲ ಕಠಿಣ ವರ್ಕೌಟ್ ಮಾಡುತ್ತಿದ್ದರು. ಅವರ ವ್ಯಾನಿಟಿ ವ್ಯಾನ್‌ನಲ್ಲೂ ಬರೀ ಹಣ್ಣುಗಳೇ ಇರುತ್ತಿದ್ದವು’ ಎಂದಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ವಿಡಿಯೋ ವೈರಲ್ ಮಾಡುವವರಿಗೆ ಚಿತ್ರತಂಡದಿಂದ ಕ್ರಿಮಿನಲ್ ಪ್ರಕರಣದ ಎಚ್ಚರಿಕೆ

‘ಅವರು ಒಳಗಿನಿಂದ ಮತ್ತು ಹೊರಗಿನಿಂದ ಶ್ರೀರಾಮನನ್ನು ಆವಾಹಿಸಿಕೊಳ್ಳುವ ಹಾದಿಯಲ್ಲಿದ್ದರು. ಜನರೊಂದಿಗೆ ಅವರು ಮಾತನಾಡುತ್ತಿದ್ದ ಮತ್ತು ನಡೆದುಕೊಳ್ಳುತ್ತಿದ್ದ ರೀತಿಯೇ ಬದಲಾಗಿತ್ತು. ಸೆಟ್‌ನಲ್ಲಿ ಮಗಳು ರಾಹಾಳ ಶಿಕ್ಷಣದ ಬಗ್ಗೆ, ಆಕೆಗೆ ಯಾವ ಕೋರ್ಸ್ ಕೊಡಿಸಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚಿಸುತ್ತಿದ್ದರು. ಅವರು ಒಬ್ಬ ಅದ್ಭುತ ನಟ ಮಾತ್ರವಲ್ಲ, ಒಬ್ಬ ಅತ್ಯುತ್ತಮ ತಂದೆ ಕೂಡ ಹೌದು’ ಎಂದು ಇಂದಿರಾ ಹಾಡಿ ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us