
ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ಈ ಸಿನಿಮಾಗೆ ಸುಮಾರು 4,000 ಕೋಟಿ ರೂಪಾಯಿ ಬಜೆಟ್ ಹೂಡಲಾಗಿದೆ. ಹೀಗಾಗಿ ಹಾಕಿದ ಬಂಡವಾಳ ವಾಪಸ್ ಬರುತ್ತದೆಯೇ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಪಷ್ಟ ಉತ್ತರ ನೀಡಿದ್ದಾರೆ.
ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್ ಲೆಕ್ಕಾಚಾರದ ಬಗ್ಗೆ ನಮಿತ್ ಮಲ್ಹೋತ್ರಾ ಮಾತನಾಡಿದ್ದಾರೆ. ಬಿಬಿಸಿ ಏಷ್ಯನ್ ನೆಟ್‌ವರ್ಕ್ ಜೊತೆಗಿನ ಸಂದರ್ಶನದಲ್ಲಿ ಅವರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಮೊದಲ ಭಾಗಕ್ಕೆ ನಿರೀಕ್ಷಿತ ಗಳಿಕೆ ಬರದಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ. ಎರಡನೇ ಭಾಗವು ಆ ಎಲ್ಲಾ ಕೊರತೆಯನ್ನು ತುಂಬಿಕೊಡಲಿದೆ ಎಂಬ ಭರವಸೆಯನ್ನು ನಮಿತ್ ವ್ಯಕ್ತಪಡಿಸಿದ್ದಾರೆ.
ರಾಮಾಯಣ ಕೇವಲ ವ್ಯಾಪಾರದ ದೃಷ್ಟಿಯಿಂದ ಮಾಡಿದ ಸಿನಿಮಾವಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಿನಿಮಾ ಕೂಡ ಜಾಗತಿಕ ಮಟ್ಟದ ದೊಡ್ಡ ಚಿತ್ರಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲದು ಎಂಬುದನ್ನು ತೋರಿಸುವುದು ಅವರ ಉದ್ದೇಶವಾಗಿದೆ. ತಾಜ್ ಮಹಲ್‌ಗೆ ಬೆಲೆ ಕಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ರಾಮಾಯಣಕ್ಕೂ ಕೇವಲ ಹಣದ ಲೆಕ್ಕಾಚಾರ ಹಾಕುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಭಾಗಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕರೆ ಸಾಕು ಎಂದು ನಮಿತ್ ಹೇಳಿದ್ದಾರೆ. ಎರಡನೇ ಭಾಗವು ಮೊದಲ ಭಾಗಕ್ಕಿಂತ ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ. ಹೀಗಾಗಿ ಎರಡೂ ಭಾಗಗಳ ಬಿಡುಗಡೆಯ ನಂತರವಷ್ಟೇ ವಾಣಿಜ್ಯ ಲಾಭದ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮರ್ಚಂಡೈಸ್ ಹಾಗೂ ಥೀಮ್ ಪಾರ್ಕ್‌ಗಳ ಮೂಲಕವೂ ಹಣ ಗಳಿಸುವ ಯೋಜನೆ ಅವರ ಮುಂದಿದೆ.
ಇದನ್ನೂ ಓದಿ: ‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ
ಈ ಸಿನಿಮಾಗಾಗಿ ತಾವು ಯಾರಿಂದಲೂ ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ ಎಂದು ನಮಿತ್ ಹೇಳಿಕೊಂಡಿದ್ದಾರೆ. ಇತ್ತ ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಯಶ್ ಕೂಡ 4,000 ಕೋಟಿ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ವಿದೇಶಗಳಲ್ಲಿ ನಮ್ಮ ಸಿನಿಮಾಗಳಿಗೆ ತಕ್ಕ ಗೌರವ ಸಿಗಬೇಕಾದರೆ ಬಜೆಟ್ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳಬೇಕು ಎಂದು ಯಶ್ ತಿಳಿಸಿದ್ದಾರೆ. ಸದ್ಯ ‘ರಾಮಾಯಣ ಪಾರ್ಟ್ 2’ ಸಿನಿಮಾ 2028ರ ದೀಪಾವಳಿಗೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.