‘ಅವತಾರ್ 2’, ‘ಆರ್‌ಆರ್‌ಆರ್’ ರೆಕಾರ್ಡ್ ಬ್ರೇಕ್: 59,000 ಸ್ಕ್ರೀನ್‌ಗಳಲ್ಲಿ ‘ರಾಮಾಯಣ’ ತೆರೆಗೆ

ನಿರ್ದೇಶಕ ನಿತೀಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಪ್ರಪಂಚದಾದ್ಯಂತ 59,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರವು, 'ಅವತಾರ್ 2' ಹಾಗೂ 'ಆರ್‌ಆರ್‌ಆರ್' ಸಿನಿಮಾಗಳ ಜಾಗತಿಕ ಬಿಡುಗಡೆಯ ದಾಖಲೆಯನ್ನು ಮೀರಲು ಸಜ್ಜಾಗಿ ನಿಂತಿದೆ. 

‘ಅವತಾರ್ 2’, ‘ಆರ್‌ಆರ್‌ಆರ್’ ರೆಕಾರ್ಡ್ ಬ್ರೇಕ್: 59,000 ಸ್ಕ್ರೀನ್‌ಗಳಲ್ಲಿ ರಾಮಾಯಣ ತೆರೆಗೆ
ರಾಮಾಯಣ

Updated on: Aug 07, 2026 | 1:31 PM

ಮುಖ್ಯಾಂಶಗಳು

  • ‘ರಾಮಾಯಣ ವಿಶ್ವದಾದ್ಯಂತ ಬಿಗ್ ರಿಲೀಸ್
  • 59,000 ಸ್ಕ್ರೀನ್‌ಗಳಲ್ಲಿ 'ರಾಮಾಯಣ' ಸಿನಿಮಾ 
  • 'ಅವತಾರ್ 2' ದಾಖಲೆ ಮುರಿಯಲು ರಣಬೀರ್-ಯಶ್ ಸಿನಿಮಾ ರೆಡಿ

ನಿತೇಶ್​ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. 2026ರ ದೀಪಾವಳಿಗೆ ರಿಲೀಸ್ ಆಗಲಿರುವ ಈ ಬಹುನಿರೀಕ್ಷಿತ ಚಿತ್ರ ಪ್ರಪಂಚದಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾ ವಿಶ್ವದಾದ್ಯಂತ 59,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಸೋನಿ ಪಿಕ್ಚರ್ಸ್ ಸಂಸ್ಥೆಯು ಈ ಚಿತ್ರದ ವಿದೇಶಿ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ವಿದೇಶಗಳಲ್ಲೇ ಬರೋಬ್ಬರಿ 50,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಸುಮಾರು 9,000 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಇದು ಭಾರತೀಯ ಸಿನಿಮಾವೊಂದಕ್ಕೆ ಸಿಗುತ್ತಿರುವ ಅತಿದೊಡ್ಡ ರಿಲೀಸ್ ಆಗಿದೆ.

ಈ ಹಿಂದೆ ‘ಪುಷ್ಪ 2’ ಚಿತ್ರ 13,000 ಹಾಗೂ ‘ಆರ್‌ಆರ್‌ಆರ್’ ಚಿತ್ರ 11,000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದವು. ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ 52,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ‘ರಾಮಾಯಣ’ ಸಿನಿಮಾ ಅವತಾರ್ ಚಿತ್ರದ ದಾಖಲೆಯನ್ನೂ ಮುರಿಯಲು ಹೊರಟಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ಐಮ್ಯಾಕ್ಸ್ ರೂಪದಲ್ಲಿ ತರುತ್ತಿದ್ದಾರೆ. ಪ್ರಪಂಚದಾದ್ಯಂತ 50ಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ವಿಶೇಷ ಎಐ ತಂತ್ರಜ್ಞಾನದ ಮೂಲಕ ನಟರ ತುಟಿ ಚಲನೆಗೆ ತಕ್ಕಂತೆ ಡಬ್ ಮಾಡಲು ‘ಬ್ರಹ್ಮ ಎಐ’ ಬಳಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಇಂಗ್ಲಿಷ್ ಟ್ರೇಲರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದ ಇಂಗ್ಲಿಷ್ ಟ್ರೇಲರ್ ನೋಡಿ ವಿದೇಶಿ ಪ್ರೇಕ್ಷಕರು ಹೇಳಿದ್ದೇನು?

ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಆಸ್ಕರ್ ವಿಜೇತ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us