
ರಾಣಾ ದಗ್ಗುಬಾಟಿ (Rana Daggubati) ತೆಲುಗು ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ‘ಬಾಹುಬಲಿ’ ಸಿನಿಮಾದ ಅವರ ಬಲ್ಲಾಳದೇವ ಪಾತ್ರ ಮರೆಯಲಾಗದು. ನಟರಾಗಿರುವ ರಾಣಾ ದಗ್ಗುಬಾಟಿ ಒಳ್ಳೆಯ ಉದ್ಯಮಿಯೂ ಹೌದು. ನಟನಾಗುವ ಮುಂಚೆಯೇ ಸ್ಪಿರಿಟ್ ಹೆಸರಿನ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದ ರಾಣಾ ದಗ್ಗುಬಾಟಿ, ವಿಎಫ್ಎಕ್ಸ್ ಸ್ಟುಡಿಯೋ ಸಹ ಪ್ರಾರಂಭಿಸಿದ್ದರು. ನಟನೆ ಜೊತೆಗೆ ಸಿನಿಮಾದ ಹಲವು ವಿಭಾಗಗಳ ಉದ್ಯಮ ಹೊಂದಿರುವ ರಾಣಾ ದಗ್ಗುಬಾಟಿ ಇದೀಗ ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ರಾಮಾ ನಾಯ್ಡು ಸ್ಟುಡಿಯೋದ ಉದ್ಯಮ, ನಿರ್ಮಾಣ ಕಾರ್ಯಗಳನ್ನು ನೋಡಿಕೊಳ್ಳುತ್ತಲೇ ತಮ್ಮ ಸ್ಪಿರಿಟ್ ಮೀಡಿಯಾ ಸಂಸ್ಥೆಯಿಂದಲೂ ಸಿನಿಮಾ ನಿರ್ಮಾಣವನ್ನು ರಾಣಾ ದಗ್ಗುಬಾಟಿ ಆರಂಭಿಸಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ‘ಕಾಂತಾ’ ಹೆಸರಿನ ಸಿನಿಮಾ ಅನ್ನು ರಾಣಾ ದಗ್ಗುಬಾಟಿ ನಿರ್ಮಾಣ ಮಾಡುತ್ತಿದ್ದಾರೆ. ‘ಕಾಂತಾ’ ಸಿನಿಮಾ ಬಿಡುಗಡೆಗೆ ಮುಂಚೆಯೇ ರಾಣಾ ದಗ್ಗುಬಾಟಿ ಸ್ಟಿರಿಟ್ ಮೀಡಿಯಾದ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ.
ರಾಣಾ ದಗ್ಗುಬಾಟಿ ಈಗಾಗಲೇ ಹಲವು ಬಾಲಿವುಡ್ ಸಿನಿಮಾಗಳಲ್ಲಿ ತಮ್ಮನ್ನು ಉದ್ಯಮಿಯಾಗಿ ತೊಡಗಿಸಿಕೊಂಡಿದ್ದಾರೆ. ವಿತರಣೆ, ಪ್ರಚಾರ ಇನ್ನೂ ಕೆಲವು ಕಾರ್ಯಗಳಲ್ಲಿ ರಾಣಾ ದಗ್ಗುಬಾಟಿ ಹಿಂದಿಯ ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ರಾಣಾ ದಗ್ಗುಬಾಟಿ ಸಿನಿಮಾ ನಿರ್ಮಾಪಕರಾಗಿ ಹಿಂದಿಗೆ ಎಂಟ್ರಿ ನೀಡಿದ್ದಾರೆ. ರಾಣಾ ದಗ್ಗುಬಾಟಿ ಬಾಲಿವುಡ್ ಸಿನಿಮಾ ನಿರ್ಮಿಸಲಿದ್ದು, ವಿಶೇಷವೆಂದರೆ ಈ ಸಿನಿಮಾ ಕಾದಂಬರಿ ಆಧರಿತ ಸಿನಿಮಾ ಆಗಿರಲಿದೆ.
ಇದನ್ನೂ ಓದಿ:ನಟ ರಾಣಾ ದಗ್ಗುಬಾಟಿ, ವೆಂಕಟೇಶ್ ವಿರುದ್ಧ ಕ್ರಿಮಿನಲ್ ಕೇಸು ದಾಖಲು
ಬೂಕರ್ ಪ್ರಶಸ್ತಿ ವಿಜೇತ ಕರ್ನಾಟಕ ಮೂಲದ ಕಾದಂಬರಿಕಾರ ಅರವಿಂದ್ ಅಡಿಗ ಅವರು ಬರೆದಿರುವ ‘ಲಾಸ್ಟ್ ಮ್ಯಾನ್ ಇನ್ ಟವರ್’ ಕಾದಂಬರಿಯನ್ನು ಸಿನಿಮಾ ಮಾಡಲು ರಾಣಾ ದಗ್ಗುಬಾಟಿ ಮುಂದಾಗಿದ್ದು, ಈ ಸಿನಿಮಾಕ್ಕೆ ಬಾಲಿವುಡ್ನ ಪ್ರತಿಭಾವಂತ ನಟ ಮನೋಜ್ ಬಾಜಪೇಯಿ ಅವರನ್ನು ನಟರನ್ನಾಗಿ ಆಯ್ಕೆ ಮಾಡಲಾಗಿದೆ. ಎಂಥಹದ್ದೇ ಪಾತ್ರಕ್ಕೂ ಜೀವ ತುಂಬಬಲ್ಲ ನಟರಾಗಿರುವ ಮನೋಜ್ ಅವರ ಬಗ್ಗೆ ರಾಣಾ ಈ ಹಿಂದೆಯೂ ಅಭಿಮಾನ ವ್ಯಕ್ತಪಡಿಸಿದ್ದರು. ಇದೀಗ ತಮ್ಮ ಮೊದಲ ಬಾಲಿವುಡ್ ಸಿನಿಮಾಕ್ಕೆ ಮನೋಜ್ ಅವರನ್ನು ನಟರನ್ನಾಗಿ ಆಯ್ಕೆ ಮಾಡಿದ್ದಾರೆ.
ಈ ಸಿನಿಮಾವನ್ನು ಹಾಲಿವುಡ್ ನಿರ್ದೇಶಕ ಬೆನ್ ರೇಖಿ ನಿರ್ದೇಶನ ಮಾಡಲಿರುವುದು ವಿಶೇಷ. ಅಮೆರಿಕದ ಸಿನಿಮಾ ಕರ್ಮಿ ಆಗಿರುವ ಬೆನ್ ರೇಖಿ ಈ ಹಿಂದೆ ‘ವಾಟರ್ಬಾರ್ನ್’, ‘ಫನ್ ಸೈಜ್ ಹಾರರ್’ ಮತ್ತು ಭಾರತದಲ್ಲಿ ಚಿತ್ರೀಕರಣ ಮಾಡಿರುವ ‘ದಿ ಆಶ್ರಮ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಅರವಿಂದ ಅಡಿಗ ಅವರ ‘ಲಾಸ್ಟ್ ಮ್ಯಾನ್ ಇನ್ ಟವರ್’ ಕಾದಂಬರಿಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ಏಕಕಾಲದಲ್ಲಿ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಆಗುತ್ತಿರುವ ಅರವಿಂದ ಅಡಿಗರ ಎರಡನೇ ಕಾದಂಬರಿ ಇದಾಗಿದೆ. ಬೂಕರ್ ಪ್ರಶಸ್ತಿ ವಿಜೇತ ಕೃತಿ ‘ದಿ ವೈಟ್ ಟೈಗರ್’ ಕಾದಂಬರಿಯನ್ನು ಸಿನಿಮಾ ಮಾಡಲಾಗಿತ್ತು. ಆ ಸಿನಿಮಾವನ್ನು ಪ್ರಿಯಾಂಕಾ ಚೋಪ್ರಾ ನಿರ್ಮಾಣ ಮಾಡಿದ್ದರು. ಸಿನಿಮಾನಲ್ಲಿ ಆದರ್ಶ್, ರಾಜಕುಮಾರ್ ರಾವ್ ಮತ್ತು ಸ್ವತಃ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಆದರ್ಶ್ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ