ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ (Ranbir Kapoor) ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದಾಗ್ಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಕಮರ್ಷಿಯಲ್ ಆಗಿ ಈ ಚಿತ್ರ ಯಶಸ್ಸು ಕಂಡಿದೆ. ಭಾನುವಾರವೂ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ದಾಖಲೆಯನ್ನು ಬದಿಗಟ್ಟಿದೆ. ಕೇವಲ ಮೂರು ದಿನಕ್ಕೆ ರಣಬೀರ್ ಕಪೂರ್ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಓಪನಿಂಗ್ ದಿನ (ಡಿಸೆಂಬರ್ 1) ‘ಅನಿಮಲ್’ ಸಿನಿಮಾ 72.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡನೇ ದಿನ 66.27 ಕೋಟಿ ರೂಪಾಯಿ ಹಾಗೂ ಮೂರನೇ ದಿನ 72.50 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 202 ಕೋಟಿ ರೂಪಾಯಿ ಆಗಿದೆ. ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದ್ದ ಹೊರತಾಗಿಯೂ ಜನರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಸಿನಿಮಾದ ಅವಧಿ ದೀರ್ಘವಾಗಿ ಇದ್ದಾಗ ಶೋಗಳ ಸಂಖ್ಯೆ ಕಡಿಮೆ ಆಗುತ್ತದೆ. ಆಗ ಸಹಜವಾಗಿ ಕಲೆಕ್ಷನ್ ತಗ್ಗುತ್ತದೆ. ಆದರೆ, ‘ಅನಿಮಲ್’ ವಿಚಾರದಲ್ಲಿ ಇದು ಸುಳ್ಳಾಗಿದೆ. ಈ ಮೊದಲು ‘ಪಠಾಣ್’ ಸಿನಿಮಾ ಮೂರು ದಿನಕ್ಕೆ 166.75 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು, ‘ಅನಿಮಲ್’ ಸಿನಿಮಾ ಹಿಂದಿಕ್ಕಿದೆ. ವಿಶ್ವಾದ್ಯಂತ ‘ಅನಿಮಲ್’ ಸಿನಿಮಾ 300+ ಕೋಟಿ ರೂಪಾಯಿ ಬಾಚಿಕೊಂಡಿದೆ.
ಸೋಮವಾರ ಸಿನಿಮಾ ಎಷ್ಟು ಗಳಿಕೆ ಮಾಡುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ವಾರದ ದಿನಗಳಲ್ಲಿ 3 ಗಂಟೆ 21 ನಿಮಿಷದ ಸಿನಿಮಾ ನೋಡಲು ಎಲ್ಲರ ಬಳಿಯೂ ಸಮಯ ಇರುವುದಿಲ್ಲ. ಆದಾಗ್ಯೂ ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೆ ‘ಅನಿಮಲ್’ ಸಿನಿಮಾ ರಿಯಲ್ ವಿನ್ನರ್ ಎನಿಸಿಕೊಳ್ಳಲಿದೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದ ಮುಂದಿನ ಭಾಗ ಬರುವುದು ಪಕ್ಕಾ, ಸಿನಿಮಾದ ಹೆಸರೇನು?
‘ಅನಿಮಲ್’ ಸಿನಿಮಾಗೆ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ಸಖತ್ ರಗಡ್ ಆಗಿ ಈ ಸಿನಿಮಾ ಮೂಡಿ ಬಂದಿದೆ. ಈ ಕಾರಣಕ್ಕೆ ಸಿನಿಮಾ ಅನೇಕರಿಗೆ ಇಷ್ಟವಾಗಿದೆ. ರಣಬೀರ್ ಕಪೂರ್ ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ಈ ಚಿತ್ರದ ಮೂಲಕ ರಣಬೀರ್ ಕಪೂರ್ ಮತ್ತೊಮ್ಮೆ ಗೆದ್ದಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಗೆಲುವು ಕಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Mon, 4 December 23