
ಆರ್ಕೆ ಸ್ಟುಡಿಯೋ (RK Studio) 1948ರಲ್ಲಿ ರಾಜ್ ಕಪೂರ್ ನಿರ್ಮಾಣ ಮಾಡಿದರು. ಮುಂಬೈನ ಚೆಂಬುರ್ನಲ್ಲಿರುವ ಈ ಐತಿಹಾಸಿಕ ಸ್ಟುಡಿಯೋನಲ್ಲಿ ಹಲವಾರು ಬಾಲಿವುಡ್ ಸಿನಿಮಾಗಳು ಚಿತ್ರೀಕರಣಗೊಂಡಿವೆ. ಇದೇ ಸ್ಟುಡಿಯೋನಲ್ಲಿ ಆರ್ಕೆ ಫಿಲಮ್ಸ್ ನಿರ್ಮಾಣ ಸಂಸ್ಥೆಯನ್ನು ಸಹ ರಾಜ್ ಕಪೂರ್ ಪ್ರಾರಂಭ ಮಾಡಿದ್ದರು. 2017 ರಲ್ಲಿ ರಾಜ್ ಕಪೂರ್ ಸ್ಟುಡಿಯೋಕ್ಕೆ ಬೆಂಕಿ ಬಿದ್ದು ಭಾರಿ ನಷ್ಟ ಉಂಟಾಯ್ತು, ರಾಜ್ ಕಪೂರ್ ಸೇರಿದಂತೆ ಹಲವು ದಿಗ್ಗಜರಿಗೆ ಸೇರಿದ್ದ ಅಮೂಲ್ಯ ವಸ್ತುಗಳು ನಾಶವಾದವು, ಸೆಟ್ಗಳು ನಾಶವಾದವು. ಕೊನೆಗೆ 2019 ರಲ್ಲಿ ಆರ್ಕೆ ಸ್ಟುಡಿಯೋ ಅನ್ನು ಗೋದ್ರೆಜ್ಗೆ ಮಾರಾಟ ಮಾಡಲಾಯ್ತು. ಆದರೆ ಇದೀಗ ರಣ್ಬೀರ್ ಕಪೂರ್ ಆರ್ಕೆ ಫಿಲಮ್ಸ್ ಅನ್ನು ಮತ್ತೆ ಪ್ರಾರಂಭಿಸಲು ಮುಂದಾಗಿದ್ದಾರೆ.
ಸ್ಟುಡಿಯೋ ಇದ್ದ ಜಾಗದಲ್ಲಿ ಗೋದ್ರೆಜ್ ಅಪಾರ್ಟ್ಮೆಂಟ್ಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಆರ್ಕೆ ಫಿಲಮ್ಸ್ ಅನ್ನಾದರೂ ಉಳಿಸಿಕೊಳ್ಳುವ ಮತ್ತು ಅದನ್ನು ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಯನ್ನಾಗಿ ರೂಪಿಸುವ ಯೋಜನೆಯನ್ನು ರಾಜ್ ಕಪೂರ್ ಅವರ ಮೊಮ್ಮಗ ರಣ್ಬೀರ್ ಕಪೂರ್ ಕೈಗೆತ್ತಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ತಾವೇ ನಿರ್ದೇಶಿಸಲಿರುವ ಸಿನಿಮಾದ ಮೂಲಕ ರೀ ಲಾಂಚ್ ಮಾಡಲಿದ್ದಾರೆ.
ಆರ್ಕೆ ಫಿಲಮ್ಸ್ 1948ರಲ್ಲೇ ಪ್ರಾರಂಭವಾದರೂ ಸಹ ದೊಡ್ಡ ಸಂಖ್ಯೆಯ ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ. ಈ ವರೆಗೆ ಕೇವಲ 21 ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡಲಾಗಿದೆ. ಕಪೂರ್ ಕುಟುಂಬಕ್ಕೆ ಸೇರಿದವರು ನಟಿಸಿದ ಅಥವಾ ನಿರ್ದೇಶನ ಮಾಡಿದ ಸಿನಿಮಾಗಳನ್ನಷ್ಟೆ ‘ಆರ್ಕೆ ಫಿಲಮ್ಸ್ ಮೂಲಕ ನಿರ್ಮಾಣ ಮಾಡಲಾಗಿತ್ತು. 1999 ರಲ್ಲಿ ರಿಶಿ ಕಪೂರ್ ನಿರ್ದೇಶಿಸಿದ್ದ ‘ಆ ಅಬ್ ಲೌಟ್ ಚಲೆ’ ಸಿನಿಮಾ, ಆರ್ಕೆ ಫಿಲಮ್ಸ್ನ ಕೊನೆಯ ಸಿನಿಮಾ ಆಗಿತ್ತು. ಇದೀಗ 26 ವರ್ಷಗಳ ಬಳಿಕ ರಣ್ಬೀರ್ ಕಪೂರ್ ತಮ್ಮದೇ ನಿರ್ದೇಶನದ ಮೂಲಕ ಆರ್ಕೆ ಫಿಲಮ್ಸ್ ಅನ್ನು ರೀಲಾಂಚ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ಡಿಗರ ಹಾಲೋವೀನ್ ಪಾರ್ಟಿ: ಯಾರ್ಯಾರಾದಿದ್ದಾರೆ ನೋಡಿ
ಅದು ಮಾತ್ರವೇ ಅಲ್ಲದೆ ತಮ್ಮದೇ ನಟನೆಯ ಎರಡು ಸಿನಿಮಾಗಳನ್ನು ಆರ್ಕೆ ಫಿಲಮ್ಸ್ ಮೂಲಕ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ‘ಬ್ರಹ್ಮಾಸ್ತ್ರ 2’ ಮತ್ತು ಅನುರಾಗ್ ಬಸು ನಿರ್ದೇಶಿಸಲಿರುವ ಇನ್ನೊಂದು ಸಿನಿಮಾವನ್ನು ಸಹ ಆರ್ಕೆ ಫಿಲಮ್ಸ್ ಮೂಲಕವೇ ನಿರ್ಮಾಣ ಮಾಡಲು ರಣ್ಬೀರ್ ಕಪೂರ್ ಮುಂದಾಗಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರವೇ ಅಲ್ಲದೆ ಭಾರತದ ಬೇರೆ ಕೆಲವು ಭಾಷೆಗಳಲ್ಲಿಯೂ ಸಿನಿಮಾ ನಿರ್ಮಾಣ ಮಾಡುವ ಗುರಿಯನ್ನು ರಣ್ಬೀರ್ ಕಪೂರ್ ಹೊಂದಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Sun, 2 November 25