
ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಐದನೇ ದಿನ ಅಂದರೆ ಸೋಮವಾರದಂದು (ನವೆಂಬರ್ 9) ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಇದರಿಂದಾಗಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅವರಿಗೆ ದೊಡ್ಡ ಗೆಲುವ ಸಿಕ್ಕಂತಾಗಿದೆ.
ಸೋಮವಾರ (ನ.9) ಒಂದೇ ದಿನ ದೇಶಾದ್ಯಂತ 23,911 ಪ್ರದರ್ಶನ ಕಂಡು, ಭಾರತದಲ್ಲಿ ಒಟ್ಟು 107.50 ಕೋಟಿ ರೂಪಾಯಿ ನೆಟ್ ಸಂಗ್ರಹ ಮಾಡಿದೆ. ಈ ಮೂಲಕ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ಹೆಸರಲ್ಲಿದ್ದ ಮೊದಲ ಸೋಮವಾರದ ಗರಿಷ್ಠ ಗಳಿಕೆಯ (60 ಕೋಟಿ ರೂ.) ದಾಖಲೆಯನ್ನು ‘ರಾಮಾಯಣ’ ಸುಲಭವಾಗಿ ಮುರಿದಿದೆ.
ಐದು ದಿನಗಳ ಅಂತ್ಯಕ್ಕೆ ಭಾರತದಲ್ಲಿ ‘ರಾಮಾಯಣ’ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 346.35 ಕೋಟಿ ರೂಪಾಯಿ ತಲುಪಿದ್ದು, ಗ್ರಾಸ್ ಕಲೆಕ್ಷನ್ 413.90 ಕೋಟಿ ರೂಪಾಯಿಯಾಗಿದೆ. ಸೋಮವಾರ ವಿದೇಶಿ ಮಾರುಕಟ್ಟೆಯಿಂದ 25 ಕೋಟಿ ರೂಪಾಯಿ ಹರಿದುಬಂದಿದ್ದು, ಒಟ್ಟು ವಿದೇಶಿ ಗಳಿಕೆ 250 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ಈ ಚಿತ್ರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಗಳಿಕೆ ಭರ್ಜರಿ 663.90 ಕೋಟಿ ರೂಪಾಯಿ ತಲುಪಿದೆ.
ಸೋಮವಾರ ಹಿಂದಿ ಆವೃತ್ತಿಯು ದೇಶಾದ್ಯಂತ ಶೇಕಡಾ 73.6ರಷ್ಟು ಆಕ್ಯುಪೆನ್ಸಿ ಕಂಡಿದೆ. ಈ ಪೈಕಿ ಚೆನ್ನೈನಲ್ಲಿ 83 ಪ್ರದರ್ಶನಗಳೊಂದಿಗೆ ಶೇಕಡಾ 94ರಷ್ಟು ಆಸನಗಳು ಭರ್ತಿ ಆಗಿವೆ. ಬೆಂಗಳೂರಿನ 262 ಪ್ರದರ್ಶನಗಳಲ್ಲಿ ಶೇಕಡಾ 90.8 ಆಸನಗಳು ಭರ್ತಿಯಾಗಿವೆ. ದೆಹಲಿ-ಎನ್‌ಸಿಆರ್‌ನಲ್ಲಿ ಶೇಕಡಾ 72.5, ಹೈದರಾಬಾದ್‌ನಲ್ಲಿ ಶೇಕಡಾ 77.5 ಮತ್ತು ಮುಂಬೈನಲ್ಲಿ ಶೇಕಡಾ 69.3ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.
ಇದನ್ನೂ ಓದಿ: ‘ರಾಮಾಯಣ’ ಸೆಟ್‌ಗೆ ಭೇಟಿ ನೀಡಿದ್ದ ರಣಬೀರ್ ಕಪೂರ್ ಮಗಳು; ಫೋಟೋ ವೈರಲ್
ಸುಮಾರು 4,000 ಕೋಟಿ ರೂಪಾಯಿ ನಿರ್ಮಾಣ ವೆಚ್ಚದ ಈ ಬಿಗ್ ಬಜೆಟ್ ಸಿನಿಮಾ, ಈಗಾಗಲೇ 2026ರ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. 1,852 ಕೋಟಿ ರೂಪಾಯಿ ಗಳಿಸಿರುವ ‘ಧುರಂಧರ್: ದಿ ರಿವೇಂಜ್’ ಮತ್ತು 821 ಕೋಟಿ ರೂಪಾಯಿ ಗಳಿಸಿರುವ ‘ಜೈಲರ್ 2’ ಚಿತ್ರಗಳ ನಂತರದ ಸ್ಥಾನದಲ್ಲಿ ‘ರಾಮಾಯಣ’ ಇದೆ. ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.