‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ

‘ಧುರಂಧರ್ 2’ ಸಿನಿಮಾ ಒಂದಲ್ಲಾ ಒಂದು ವಿವಾದಕ್ಕೆ ಕಾರಣ ಆಗುತ್ತಲೇ ಇದೆ. ಈ ಚಿತ್ರದ ಕಥಾವಸ್ತು ಬಗ್ಗೆ ದೆಹಲಿ ಹೈಕೋರ್ಟ್​​ನಲ್ಲಿ ವಿಚಾರಣೆ ನಡೆದಿದೆ. ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಈ ಚಿತ್ರದಲ್ಲಿ ಬಹಿರಂಗಪಡಿಸಿದ ಆರೋಪ ಎದುರಾಗಿದೆ. ಆ ಕುರಿತು ಇಲ್ಲಿದೆ ವಿವರ..

‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ
ರಣವೀರ್ ಸಿಂಗ್
Image Credit source: Dhurandhar

Updated on: May 20, 2026 | 8:13 PM

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಸಶಸ್ತ್ರ ಪಡೆಗಳ ಸೂಕ್ಷ್ಮ ಕಾರ್ಯಾಚರಣೆಯ ವಿವರಗಳನ್ನು ಈ ಚಿತ್ರದಲ್ಲಿ ಬಹಿರಂಗಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ (CBFC) ದೆಹಲಿ ಹೈಕೋರ್ಟ್ ಬುಧವಾರ (ಮೇ 20) ನಿರ್ದೇಶನ ನೀಡಿದೆ. ಸಶಸ್ತ್ರ ಸೀಮಾ ಬಲ (SSB) ಹೆಡ್ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.

ಅರ್ಜಿದಾರರ ಪ್ರಕಾರ, ಈ ಸಿನಿಮಾದಿಂದ Official Secrets Act ಉಲ್ಲಂಘನೆ ಆಗಿದೆ. ಚಿತ್ರದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವಂತಹ ಹಲವು ಅಂಶಗಳಿವೆ ಎಂದು ಅವರು ವಾದಿಸಿದ್ದಾರೆ. DRDO ರಹಸ್ಯವಾಗಿ ತಯಾರಿಸುತ್ತಿರುವ ಔಷಧಗಳ ಕುರಿತಾದ ವಿವರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಭಾರತೀಯ ಸೇನೆಯ ಸೂಕ್ಷ್ಮ ಕಾರ್ಯಾಚರಣೆಯ ಸ್ಥಳಗಳು ಮತ್ತು ಮಿಲಿಟರಿ ತಂತ್ರಗಳನ್ನು ಸಿನಿಮಾದಲ್ಲಿ ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮೃತ ಯೋಧರು ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳಿಂದ ಪ್ರೇರಿತವಾದ ಪಾತ್ರಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಬಿಂಬಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ‘ಸಿನಿಮಾವು ಕೇವಲ ಕಾಲ್ಪನಿಕ ಮತ್ತು ಮನರಂಜನೆಗಾಗಿ ಮಾಡಲ್ಪಟ್ಟಿದ್ದರೂ ಸಹ, ಸಮಾಜ ಮತ್ತು ದೇಶದ ಭದ್ರತೆಯ ಮೇಲೆ ಅದರ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ’ ಎಂದು ವಿಚಾರಣೆ ವೇಳೆ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

‘ರಕ್ಷಣಾ ಇಲಾಖೆಯ ಕಾರ್ಯಾಚರಣೆಯ ವಿವರಗಳು ಮತ್ತು ಮಿಲಿಟರಿ ತಂತ್ರಗಳನ್ನು ಬಹಿರಂಗಪಡಿಸುವ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಈ ಬಗ್ಗೆ ಸೆನ್ಸಾರ್ ಮಂಡಳಿ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿರಬೇಕು. ಸದ್ಯಕ್ಕೆ ನಾವು ಈ ಅರ್ಜಿಯನ್ನು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇವೆ’ ಎಂದು ಪೀಠವು ಹೇಳಿದೆ.

ಇದನ್ನೂ ಓದಿ: ಧುರಂಧರ್ ಗೆಲುವಿನ ಎಫೆಕ್ಟ್: ನೋರಾ ಫತೇಹಿ ಜೊತೆ ಡ್ಯಾನ್ಸ್ ಮಾಡಿದ ರಾಕೇಶ್ ಬೇಡಿ

ನ್ಯಾಯಾಲಯವು ಚಿತ್ರದ ಪ್ರದರ್ಶನಕ್ಕೆ ನೇರ ನಿಷೇಧ ಹೇರದೆ, ಅರ್ಜಿದಾರರ ಅರ್ಜಿಯನ್ನೇ ಅಧಿಕೃತ ಮನವಿ ಎಂದು ಪರಿಗಣಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಸಿನಿಮಾ ಮಾಡುವಾಗ ಸೃಜನಶೀಲ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ದೇಶದ ಭದ್ರತೆಯೂ ಅಷ್ಟೇ ಮುಖ್ಯ ಎಂಬ ಚರ್ಚೆ ಈಗ ಚಿತ್ರರಂಗದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us