
ರಣವೀರ್ ಸಿಂಗ್ (Ranveer Singh) ನಟನೆಯ ಬಹುನಿರೀಕ್ಷಿತ ಸಿನಿಮಾ ‘83’ (83 Movie) ಈಗ ಬಿಡುಗಡೆ ದಿನಾಂಕ ಘೋಷಿಸಿಕೊಂಡಿದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿ.24ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ಕ್ರಿಕೆಟ್ ಪ್ರೇಮಿಗಳು ಮತ್ತು ಸಿನಿಪ್ರಿಯರು ಬಹಳ ತಿಂಗಳುಗಳಿಂದ ಕಾದಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಪದೇ ಪದೇ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಿತ್ತು. ಈಗ ಅಂತಿಮವಾಗಿ ‘83’ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ (83 Movie Teaser) ಮೂಲಕ ರಿಲೀಸ್ ದಿನಾಂಕವನ್ನು ಖಚಿತಪಡಿಸಲಾಗಿದೆ. ಖ್ಯಾತ ನಿರ್ದೇಶಕ ಕಬೀರ್ ಖಾನ್ (Kabir Khan) ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಕೂಡ ನಟಿಸಿದ್ದಾರೆ. ಕಪಿಲ್ ದೇವ್ (Kapil Dev) ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದರೆ, ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ.
1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ‘83’ ಸಿನಿಮಾ ಮೂಡಿಬಂದಿದೆ. ಕಪಿಲ್ ದೇವ್ ಪಾತ್ರದಲ್ಲಿ ನಟಿಸಲು ರಣವೀರ್ ಸಿಂಗ್ ತುಂಬ ಶ್ರಮಪಟ್ಟಿದ್ದಾರೆ. ಟೀಸರ್ ಮತ್ತು ಪೋಸ್ಟರ್ಗಳಲ್ಲಿ ಅವರ ಲುಕ್ ಗಮನ ಸೆಳೆದಿದೆ. ಇಡೀ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘83’ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.
ಟೀಸರ್ ಹಂಚಿಕೊಂಡಿರುವ ರಣವೀರ್ ಸಿಂಗ್ ಅವರು ಟ್ರೇಲರ್ ಬಿಡುಗಡೆಯ ದಿನಾಂಕವನ್ನು ತಿಳಿಸುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿದ್ದಾರೆ. ‘ಭಾರತದ ದೊಡ್ಡ ಗೆಲುವಿನ ಹಿಂದಿರುವ ಕಥೆಯನ್ನು ವಿವರಿಸುವ ‘83’ ಸಿನಿಮಾ ಡಿ.24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ನವೆಂಬರ್ 30ರಂದು ಟ್ರೇಲರ್ ಬಿಡುಗಡೆ ಆಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ತಿಹಾರ್ ರಾಜ್ ಭಾಸಿನ್, ಸಾಖಿಬ್ ಸಲೀಮ್, ಅಮೃತಾ ಪುರಿ, ಪಂಕಜ್ ತ್ರಿಪಾಠಿ, ಚಿರಾಗ್ ಪಾಟಿಲ್, ಸಾಹಿಲ್ ಕಟ್ಟರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕ್ರಿಕೆಟ್ ಮತ್ತು ಸಿನಿಮಾ ಜಗತ್ತಿಗೆ ಹತ್ತಿರದ ನಂಟು. ಹಲವು ಕ್ರಿಕೆಟ್ ಆಟಗಾರರ ಬದುಕು ಈಗಾಗಲೇ ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದಿದೆ. ಅದೇ ರೀತಿ 1983ರ ವಿಶ್ವಕಪ್ ಗೆಲುವನ್ನು ತೆರೆಗೆ ತರಲು ‘83’ ಚಿತ್ರ ಪ್ರಯತ್ನಿಸಿದೆ.
ಈ ಸಿನಿಮಾದಲ್ಲಿ ಯಾವೆಲ್ಲ ಅಂಶಗಳು ಹೈಲೈಟ್ ಆಗಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘ಪುಷ್ಪ’ (ಡಿ.17) ಮುಂತಾದ ಬಿಗ್ ಬಜೆಟ್ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಹಾಗಾಗಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಸಹ ಏರ್ಪಡಲಿದೆ.
ಇದನ್ನೂ ಓದಿ:
‘ನಾಗಿಣಿ’ ಸೀರಿಯಲ್ ನಟಿಯರಿಗೆ ರಣವೀರ್ ಸಿಂಗ್ ಪೈಪೋಟಿ; ಸ್ನೇಕ್ ಡ್ಯಾನ್ಸ್ ಕಂಡು ನಿರ್ಮಾಪಕಿ ಫಿದಾ
ಕತ್ರಿನಾ ಕೈಫ್-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್