‘ನಾಗಿಣಿ’ ಸೀರಿಯಲ್ ನಟಿಯರಿಗೆ ರಣವೀರ್ ಸಿಂಗ್ ಪೈಪೋಟಿ; ಸ್ನೇಕ್ ಡ್ಯಾನ್ಸ್ ಕಂಡು ನಿರ್ಮಾಪಕಿ ಫಿದಾ
Ranveer Singh: ಶೀಘ್ರವೇ ಆರಂಭ ಆಗಲಿರುವ ‘ನಾಗಿನ್ 6’ ಧಾರಾವಾಹಿಯಲ್ಲಿ ನಾಗಿಣಿ ಪಾತ್ರವನ್ನು ಯಾವ ನಟಿ ಮಾಡುತ್ತಾರೆ ಎಂಬ ಕೌತುಕ ಮೂಡಿದೆ. ಈ ನಡುವೆ ರಣವೀರ್ ಸಿಂಗ್ ಸ್ನೇಕ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ನಟ ರಣವೀರ್ ಸಿಂಗ್ (Ranveer Singh) ಅವರ ಪ್ರತಿಭೆ ಎಂಥದ್ದು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಎಂಥ ಪಾತ್ರ ಕೊಟ್ಟರೂ ಅವರು ಅದಕ್ಕೆ ಜೀವ ತುಂಬುತ್ತಾರೆ. ಬಾಜಿರಾವ್, ಅಲ್ಲಾವುದ್ದೀನ್ ಖಿಲ್ಜಿ ಮುಂತಾದ ಪಾತ್ರಗಳ ಮೂಲಕ ಅವರು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ನಟಿಸಿದ ಬಹುನಿರೀಕ್ಷಿತ ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಜಯೇಶ್ ಭಾಯ್ ಜೋರ್ದಾರ್’, ‘ಸರ್ಕಸ್’, ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ನಡುವೆ ಅವರು ‘ನಾಗಿಣಿ’ ಸೀರಿಯಲ್ (Naagini Serial) ನಟಿಯರಿಗೆ ಪೈಪೋಟಿ ನೀಡಿದ್ದಾರೆ. ವೇದಿಕೆ ಮೇಲೆ ಮೌನಿ ರಾಯ್ (Mouni Roy) ಪುಂಗಿ ಊದಿದ್ದರೆ, ರಣವೀರ್ ಸಿಂಗ್ ಹಾವಿನಂತೆ ನರ್ತಿಸಿದ್ದಾರೆ. ಅದನ್ನು ಕಂಡು ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಫುಲ್ ಖುಷ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ರಣವೀರ್ ಸಿಂಗ್ ಅವರು ಹಿಂದಿಯ ‘ಕಲರ್ಸ್ ಟಿವಿ’ಯಲ್ಲಿ ‘ದಿ ಬಿಗ್ ಪಿಕ್ಚರ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಏಕ್ತಾ ಕಪೂರ್ ಮತ್ತು ನಟಿ ಮೌನಿ ರಾಯ್ ಅತಿಥಿಗಳಾಗಿ ಆಗಮಿಸಿದ್ದರು. ‘ನಾಗಿನ್’ ಧಾರಾವಾಹಿಯ 5 ಸೀಸನ್ಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದ ಖ್ಯಾತಿ ಏಕ್ತಾ ಕಪೂರ್ ಅವರಿಗೆ ಸಲ್ಲುತ್ತದೆ. ಮೊದಲ ಸೀಸನ್ನಲ್ಲಿ ನಾಗಿಣಿ ಪಾತ್ರವನ್ನು ಮಾಡುವ ಮೂಲಕ ಮೌನಿ ರಾಯ್ ಅವರ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರು ಎದುರು ಈಗ ರಣವೀರ್ ಸಿಂಗ್ ಸ್ನೇಕ್ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.
‘ಏಕ್ತಾ ಕಪೂರ್ ಬಂದಿದ್ದಾರೆ ಎಂದಮೇಲೆ ನಾನು ನಾಗರಾಜ್ ಪಾತ್ರಕ್ಕೆ ಆಡಿಷನ್ ನೀಡುತ್ತೇನೆ’ ಎಂದು ವೇದಿಕೆಯಲ್ಲಿ ರಣವೀರ್ ಸಿಂಗ್ ಸಜ್ಜಾದರು. ಮೌನಿ ರಾಯ್ ಪುಂಗಿ ಊದಿದಂತೆ ನಟಿಸಿದರೆ, ರಣವೀರ್ ಭರ್ಜರಿಯಾಗಿ ಸ್ಟೆಪ್ ಹಾಕಿದರು. ಅದನ್ನು ನೋಡಿ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಖತ್ ಮೆಚ್ಚುಗೆ ಆಯಿತು. ‘ಇದನ್ನು ನೋಡಿದ ಮೇಲೆ ನಾಗಿಣಿಗಳ ಅವಶ್ಯಕತೆಯೇ ಇಲ್ಲ. ನಾಗರಾಜನಿಂದಲೇ ಕೆಲಸ ಮಾಡಿಸಿಕೊಳ್ಳಬಹುದು’ ಎಂದು ಏಕ್ತಾ ಕಪೂರ್ ಹೊಗಳಿದ್ದಾರೆ.
‘ನಾಗಿನ್’ ಧಾರಾವಾಹಿಯ 6ನೇ ಸೀಸನ್ಗೆ ಸಕಲ ಸಿದ್ಧತೆ ನಡೆದಿದೆ. ರಣವೀರ್ ಸಿಂಗ್ ನಡೆಸಿಕೊಡುತ್ತಿರುವ ‘ದಿ ಬಿಗ್ ಪಿಕ್ಚರ್’ ಕಾರ್ಯಕ್ರಮ 2022ರ ಜ.23ಕ್ಕೆ ಅಂತ್ಯವಾಗಲಿದೆ. ಆ ಬಳಿಕ ‘ನಾಗಿನ್ 6’ ಪ್ರಸಾರ ಆರಂಭ ಆಗಲಿದೆ. ಈ ಬಾರಿ ನಾಗಿಣಿ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳುತ್ತಾರೆ ಎಂಬ ಕೌತುಕ ಮೂಡಿದೆ. ಆ ನಟಿಯ ಹೆಸರು ‘ಎಂ’ ಅಕ್ಷರದಿಂದ ಶುರುವಾಗುತ್ತದೆ ಎಂದು ಏಕ್ತಾ ಕಪೂರ್ ಸುಳಿವು ಕೊಟ್ಟಿದ್ದಾರೆ. ಅದು ಮೌನಿ ರಾಯ್ ಇರಬಹುದು ಎಂದು ಜನರು ಊಹಿಸುತ್ತಿದ್ದಾರೆ.
ಇದನ್ನೂ ಓದಿ:
Namratha Gowda: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?