ಕನ್ನಡದಲ್ಲೂ ಬಿಡುಗಡೆ ಆಯ್ತು ‘ಧುರಂಧರ್ 2’: ಇಷ್ಟು ದಿನ ತಡವಾಗಿದ್ದು ಯಾಕೆ?

‘ಧುರಂಧರ್ 2’ ಸಿನಿಮಾವನ್ನು ಕನ್ನಡದಲ್ಲಿ ನೋಡಬೇಕು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಗುಡ್ ನ್ಯೂಸ್. ಇಷ್ಟು ದಿನ ಈ ಸಿನಿಮಾದ ಕನ್ನಡ ವರ್ಷನ್ ಬಿಡುಗಡೆ ಆಗಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿದ್ದವು. ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಕನ್ನಡ ಭಾಷೆಯಲ್ಲಿ ‘ಧುರಂಧರ್ 2’ ರಿಲೀಸ್ ಮಾಡಲಾಗಿದೆ.

ಕನ್ನಡದಲ್ಲೂ ಬಿಡುಗಡೆ ಆಯ್ತು ‘ಧುರಂಧರ್ 2’: ಇಷ್ಟು ದಿನ ತಡವಾಗಿದ್ದು ಯಾಕೆ?
Dhurandhar 2

Updated on: Mar 23, 2026 | 5:29 PM

ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ‘ಧುರಂಧರ್ 2’ (Dhurandhar 2) ಎಲ್ಲ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 18ರ ಸಂಜೆಯಿಂದಲೇ ಈ ಚಿತ್ರದ ಪ್ರದರ್ಶನ ಆರಂಭ ಆಯಿತು. ಆದರೆ ಕನ್ನಡ ವರ್ಷನ್ ಬಿಡುಗಡೆ ಆಗಿರಲಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಅವತರಣಿಕೆಯ (Dhurandhar 2 Kannada Version) ಬಿಡುಗಡೆ ಕೆಲವು ದಿನಗಳ ಕಾಲ ವಿಳಂಬವಾಗಿತ್ತು. ಇದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಕನ್ನಡದ ಪ್ರೇಕ್ಷಕರು ಕೂಡ ಈ ‘ಧುರಂಧರ್ 2’ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಕನ್ನಡ ವರ್ಷನ್ ವಿಳಂಬಕ್ಕೆ ಕಾರಣವೇನು? ಮಾರ್ಚ್ 19ರಂದು ಹಿಂದಿ ಆವೃತ್ತಿಯು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಯಿತು. ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ಅದೇ ದಿನ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಪ್ರಾದೇಶಿಕ ಭಾಷೆಗಳ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದ ಕಾರಣ ಕೊನೆಯ ಕ್ಷಣದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು.

‘ಧುರಂಧರ್ 2’ ಚಿತ್ರದ ಡಬ್ಬಿಂಗ್ ಕೆಲಸಗಳು ಅಂತಿಮ ಹಂತದಲ್ಲಿ ಬಾಕಿ ಉಳಿದಿದ್ದವು ಮತ್ತು ಡಿಜಿಟಲ್ ಕಂಟೆಂಟ್ (DCP) ಚಿತ್ರಮಂದಿರಗಳಿಗೆ ತಲುಪಲು ಸಮಯ ಹಿಡಿಯಿತು ಎಂಬ ಮಾಹಿತಿ ಕೂಡ ಇದೆ. ಆ ಕಾರಣದಿಂದ ಕನ್ನಡ ವರ್ಷನ್ ಬಿಡುಗಡೆಗೆ ಸಮಸ್ಯೆ ಆಗಿತ್ತು. ಅದಕ್ಕಾಗಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕ ಆದಿತ್ಯ ಧರ್ ಅವರು ಈ ವಿಳಂಬಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದರು. ‘ನಮ್ಮ ಚಿತ್ರವನ್ನು ಎಲ್ಲ ಭಾಷೆಗಳಲ್ಲಿ ಏಕಕಾಲಕ್ಕೆ ತೋರಿಸಬೇಕೆಂಬ ಆಸೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ವಿಳಂಬದ ನಂತರ ಬಿಡುಗಡೆಯಾದರೂ ಕೂಡ ಕರ್ನಾಟಕದಲ್ಲಿ ‘ಧುರಂಧರ್ 2’ ಕನ್ನಡ ವರ್ಷನ್​​ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕನ್ನಡ ಆವೃತ್ತಿಯ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ. ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಸಿನಿಮಾದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅವರ ಆ್ಯಕ್ಷನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಅನೇಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಕನ್ನಡದ ಖ್ಯಾತ ನಟಿ ರಮ್ಯಾ ಅವರು ಈ ಸಿನಿಮಾವನ್ನು ಟೀಕಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us