ಧೂಳೆಬ್ಬಿಸುತ್ತಿದೆ ‘ಧುರಂಧರ್’: ವೀಕೆಂಡ್, ಕ್ರಿಸ್ಮಸ್, ಹೊಸ ವರ್ಷವೂ ಭರ್ಜರಿ ಕಲೆಕ್ಷನ್ ನಿರೀಕ್ಷೆ

ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್ ನಟನೆಯ ‘ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಪ್ರತಿ ದಿನವೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಇನ್ನೂ ಹಲವು ದಿನ ಈ ಹವಾ ಮುಂದುವರಿಯಲಿದೆ. ಭಾರತದಲ್ಲಿ ಈಗಾಗಲೇ 470 ಕೋಟಿ ರೂ. ಗಳಿಸಿದ ಈ ಸಿನಿಮಾ 600 ಪ್ಲಸ್ ಕೋಟಿ ರೂ. ಗಳಿಸುವ ಸಾಧ್ಯತೆ ಕೂಡ ಇದೆ.

ಧೂಳೆಬ್ಬಿಸುತ್ತಿದೆ ‘ಧುರಂಧರ್’: ವೀಕೆಂಡ್, ಕ್ರಿಸ್ಮಸ್, ಹೊಸ ವರ್ಷವೂ ಭರ್ಜರಿ ಕಲೆಕ್ಷನ್ ನಿರೀಕ್ಷೆ
Ranveer Singh, Sara Arjun

Updated on: Dec 19, 2025 | 8:24 PM

ನಟ ರಣವೀರ್ ಸಿಂಗ್ (Ranveer Singh) ವೃತ್ತಿ ಜೀವನದ ಅತಿ ದೊಡ್ಡ ಚಿತ್ರವಾಗಿ ‘ಧುರಂಧರ್’ (Dhurandhar) ಸಿನಿಮಾ ಹೊರಹೊಮ್ಮಿದೆ. ನೈಜ ಘಟನೆಗಳನ್ನು ಆಧರಿಸಿ ಸಿದ್ಧವಾದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆ ಆಗಿ 15 ದಿನ ಕಳೆದಿದ್ದರೂ ಕೂಡ ‘ಧುರಂದರ್’ ಸಿನಿಮಾದ ಹವಾ ತಗ್ಗುತ್ತಲೇ ಇಲ್ಲ. ಅನೇಕ ಹಳೇ ದಾಖಲೆಗಳನ್ನು ಈ ಸಿನಿಮಾ ಮುರಿಯುತ್ತಿದೆ. ಈಗಾಗಲೇ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 470 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (Dhurandhar Collection) ಆಗಿದೆ. ಮುಂಬರುವ ದಿನಗಳಲ್ಲಿ ಕೂಡ ಉತ್ತಮ ಕಮಾಯಿ ಆಗಲಿದೆ.

ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನದಿಂದಲೇ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿತು. ಬಳಿಕ ಜನರಿಂದ ಬಾಯಿ ಮಾತಿನ ಪ್ರಚಾರ ಸಿಕ್ಕಿದ್ದರಿಂದ ಕಲೆಕ್ಷನ್ ಜಾಸ್ತಿ ಆಯಿತು. ಮೊದಲ ವೀಕೆಂಡ್ ಮತ್ತು ಎರಡನೇ ವೀಕೆಂಡ್​​ನಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಮೂರನೇ ವೀಕೆಂಡ್​​ನಲ್ಲಿ ಕೂಡ ಅಭೂತಪೂರ್ವ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.

‘ಧುರಂಧರ್’ ಬಿಡುಗಡೆ ಆದ ಬಳಿಕ ಕೆಲವು ಸ್ಟಾರ್ ಸಿನಿಮಾಗಳು ರಿಲೀಸ್ ಆದವು. ದರ್ಶನ್ ನಟನೆಯ ‘ದಿ ಡೆವಿಲ್’, ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಹಾಗಿದ್ದರೂ ಕೂಡ ‘ಧುರಂಧರ್’ ಕಲೆಕ್ಷನ್ ಕಡಿಮೆ ಆಗಲಿಲ್ಲ. ಅಷ್ಟೇ ಅಲ್ಲ, ಈಗ ಹಾಲಿವುಡ್​​ನ ‘ಅವತಾರ್ 3’ ಸಿನಿಮಾ ಬಂದಿದೆ. ಆದರೂ ಸಹ ‘ಧುರಂಧರ್’ ಅಬ್ಬರಿಸುತ್ತಲೇ ಇದೆ.

15ನೇ ದಿನವಾದ ಡಿಸೆಂಬರ್ 19ರಂದು ‘ಧುರಂಧರ್’ ಸಿನಿಮಾ ಹಲವು ಕಡೆಗಳಲ್ಲಿ ಹೌಸ್​ಫುಲ್ ಆಗಿದೆ. ಇನ್ನು, ಮೂರನೇ ವೀಕೆಂಡ್ ಆದ ಡಿಸೆಂಬರ್ 20 ಮತ್ತು 21ರಂದು ಹೆಚ್ಚಿನ ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ನಿರೀಕ್ಷೆ ಇದೆ. ‘ಬಾಹುಬಲಿ 2’, ‘ಪುಷ್ಪ 2’ ಮುಂತಾದ ಸಿನಿಮಾಗಳ ದಾಖಲೆಗಳನ್ನು ಮುರಿಯುವತ್ತ ‘ಧುರಂಧರ್’ ಸಿನಿಮಾ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

‘ಧುರಂಧರ್’ ಸಿನಿಮಾದ ಕಲೆಕ್ಷನ್ ಇಷ್ಟಕ್ಕೇ ನಿಲ್ಲುವುದಿಲ್ಲ. ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಬರಲಿದೆ. ಅದರ ಬೆನ್ನಲ್ಲೇ ನಾಲ್ಕನೇ ವೀಕೆಂಡ್ ಬರಲಿದೆ. ನಂತರ ಹೊಸ ವರ್ಷದ ಸೆಲೆಬ್ರೇಷನ್ ಕೂಡ ಇರುತ್ತದೆ. ಈ ಎಲ್ಲ ಸಂಭ್ರಮಗಳ ಕಾರಣದಿಂದ ‘ಧುರಂಧರ್’ ಸಿನಿಮಾಗೆ ಖಂಡಿತಾ ಉತ್ತಮವಾಗಿ ಕಲೆಕ್ಷನ್ ಆಗಲಿದೆ. ‘ಧುರಂಧರ್’ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.