
‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ಶಾರುಖ್ ಖಾನ್ ನಟಿಸಿದ್ದರು. ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ (Ranveer Singh) ಅವರನ್ನು ನಿರ್ದೇಶಕ ಫರ್ಹಾನ್ ಅಖ್ತರ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸಿನಿಮಾದ ಶೂಟ್ ಆರಂಭ ಆಗಿಲ್ಲ. ಈಗ ರಣವೀರ್ ಅವರ ‘ಧುರಂಧರ್’ ಸಿನಿಮಾದ ಫಲಿತಾಂಶ ಆಧರಿಸಿ ಈ ಸಿನಿಮಾನ ಮಾಡಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಾ ಇದೆ.
ರಣವೀರ್ ಸಿಂಗ್ ಅವರು ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಫ್ಲಾಪ್ ಸಿನಿಮಾಗಳನ್ನು ನೀಡಿದ್ದೇ ಹೆಚ್ಚು. ಒಂದಕ್ಕಿಂತ ಒಂದು ಚಿತ್ರಗಳು ಹೀನಾಯವಾಗಿ ಸೋತಿವೆ. ಈ ಕಾರಣದಿಂದ ನಿರ್ಮಾಪಕರು ಹೆಚ್ಚು ಹಣ ಹೂಡಲು ಮುಂದೆ ಬರುತ್ತಿಲ್ಲ. ‘ಡಾನ್ 3’ ಘೋಷಣೆ ಆಗಿ ಸಾಕಷ್ಟು ಸಮಯ ಆದರೂ ಚಿತ್ರದ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ರಣವೀರ್ ಸಿಂಗ್ ಮೇಲಿನ ನಂಬಿಕೆ ಕೊರೆತೆಯೇ ಇದಕ್ಕೆ ಕಾರಣ ಎಂಬ ಗುಲ್ಲು ಬಾಲಿವುಡ್ ಅಂಗಳದಲ್ಲಿ ಹರಿದಾಡಿದೆ.
ರಣವೀರ್ ಸಿಂಗ್ ನಟನೆಯ ‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಗಳೂ ಉಳಿದುಕೊಂಡಿಲ್ಲ. ಸಿನಿಮಾದ ನಾಲ್ಕು ನಿಮಿಷದ ಟ್ರೇಲರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದ್ದು, ಸಿನಿಮಾದ ಅವಧಿ 3 ಗಂಟೆ 36 ನಿಮಿಷ ಇದೆ. ಇದರ ಜೊತೆಗೆ ದೈವದ ಅವಮಾನ ಮಾಡಿ ರಣವೀರ್ ಟೀಕೆಗೆ ಗುರಿಯಾಗಿದ್ದಾರೆ. ಇದೆಲ್ಲ ವಿಷಯಗಳು ಚಿತ್ರಕ್ಕೆ ಹಿನ್ನಡೆ ಆಗಿವೆ.
ಇದನ್ನೂ ಓದಿ: ದೈವಕ್ಕೆ ಅವಮಾನ ಮಾಡಿದ ಆರೋಪ; ಬೇಷರತ್ ಕ್ಷಮೆ ಕೇಳಿದ ರಣವೀರ್ ಸಿಂಗ್
ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಕೆಲಸ ಮಾಡುವುದಕ್ಕೂ ಮೊದಲು ‘ಧುರಂಧರ್’ ಚಿತ್ರದ ಫಲಿತಾಂಶಕ್ಕೆ ಕಾದಿದ್ದಾರೆ. ರಣವೀರ್ ಸಿಂಗ್ಗೆ ಮೊದಲಿನಷ್ಟು ಅಭಿಮಾನಿಗಳನ್ನು ಕರೆತರುವ ತಾಕತ್ತು ಉಳಿದುಕೊಂಡಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲಿದ್ದಾರೆ. ಆ ಬಳಿಕವೇ ಅವರು ‘ಡಾನ್ 3’ ಆರಂಭಿಸಬೇಕಿದೆ. ಈ ಚಿತ್ರ ದೊಡ್ಡ ಬಜೆಟ್ ಕೇಳುತ್ತದೆ. ಹೀಗಾಗಿ, ಫರ್ಹಾನ್ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.