ಟೈಗರ್ ಶ್ರಾಫ್ ಮೇಲೆ ದಾಳಿ, ರ್ಯಾಪಿಡೋ ಸ್ಪಷ್ಟನೆ ನೀಡಿದ್ದೇಕೆ?
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದ ಬಂಧಿತರಲ್ಲಿ ಒಬ್ಬ ವ್ಯಕ್ತಿ ರ್ಯಾಪಿಡೋ ಬೈಕ್ ಟ್ಯಾಕ್ಸಿಯ ರೈಡರ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಬೈಕ್ ಟ್ಯಾಕ್ಸಿಯಲ್ಲಿ ಕೆಲಸ ಮಾಡುತ್ತಾ ನಟನ ಚಲನವಲನಗಳ ಮೇಲೆ ನಿಗಾ ವಹಿಸಿದ್ದನಂತೆ. ಬಂಧನದ ಬಳಿಕ ನಡೆದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಇದೀಗ ಘಟನೆಗೆ ಸಂಬಂಧಿಸಿದಂತೆ ರ್ಯಾಪಿಡೊ ಸ್ಪಷ್ಟನೆ ನೀಡಿದೆ.

ಮುಖ್ಯಾಂಶಗಳು
- ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
- ದಾಳಿ ಮಾಡಿದ ಮೂವರ ಬಂಧನ
- ಘಟನೆ ಬಗ್ಗೆ ರ್ಯಾಪಿಡೋ ಸ್ಪಷ್ಟನೆ
ಮುಂಬೈನಲ್ಲಿ ನಟ ಟೈಗರ್ ಶ್ರಾಫ್ (Tiger Shroff) ಅವರನ್ನು ಗುರಿಯಾಗಿಸಿಕೊಂಡು ಕೆಲ ಅಗಂತುಕರು ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬ ವ್ಯಕ್ತಿ ರ್ಯಾಪಿಡೋ ಬೈಕ್ ಟ್ಯಾಕ್ಸಿಯ ರೈಡರ್ ಆಗಿ ಕೆಲಸ ಮಾಡಿದ್ದರಂತೆ. ಬೈಕ್ ಟ್ಯಾಕ್ಸಿಯಲ್ಲಿ ಕೆಲಸ ಮಾಡುತ್ತಾ ನಟನ ಚಲನವಲನಗಳ ಮೇಲೆ ನಿಗಾ ವಹಿಸಿದ್ದನಂತೆ. ಬಂಧನದ ಬಳಿಕ ನಡೆದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಇದೀಗ ಘಟನೆಗೆ ಸಂಬಂಧಿಸಿದಂತೆ ರ್ಯಾಪಿಡೊ ಸ್ಪಷ್ಟನೆ ನೀಡಿದೆ.
ಬಿಹಾರದ ಬೇಗುಸರಾಯ್ನ ಪಿಪ್ರಹೀ ನಿವಾಸಿ ರಾಮು ಮಹ್ತೋ ಅವರ ಪುತ್ರ ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಫೈಟರ್ (22), ಮತ್ತು ರಾಜಸ್ಥಾನದ ಕೋಟಾದ ಫೂಲ್ ಸಿಂಗ್ (18), ಹರಿಯಾಣದ ಸೋನಿಪತ್ನ ಇದ್ಗಾ ಕಾಲೋನಿ ನಿವಾಸಿ ರಹೀಸುದ್ದೀನ್ ಅವರ ಪುತ್ರ ರೇಹಾನ್ ಅಲಿಯಾಸ್ ಸುಕ್ಕಾ (18) ಅವರುಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮೂವರು ದೆಹಲಿಗೆ ಹೋಗುವ ರೈಲನ್ನು ಹತ್ತುವ ಯತ್ನದಲ್ಲಿದ್ದಾಗ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಅಲ್ಲಿಂದ ನೇಪಾಳಕ್ಕೆ ಪರಾರಿ ಆಗಲು ಇವರು ಯೋಜಿಸಿದ್ದರಂತೆ.
ಬಂಧಿತ ಮೂವರಲ್ಲಿ ಹೃತಿಕ್ ಕುರ್ಮಿ ರಾಪಿಡೋ ಬೈಕ್-ಟ್ಯಾಕ್ಸಿ ರೈಡರ್ ಆಗಿ ಕೆಲಸ ಮಾಡಿದ್ದನಂತೆ ಮತ್ತು ಶ್ರಾಫ್ ಅವರ ಮನೆಯ ಬಗ್ಗೆ ಕಣ್ಗಾವಲಿಡಲು ಬೈಕ್-ಟ್ಯಾಕ್ಸಿ ಸವಾರಿ ಮಾಡುತ್ತಿರುವಂತೆ ನಾಟಕವಾಡಿದ್ದ ಎನ್ನಲಾಗಿದೆ. ತಮ್ಮ ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಿಕೊಂಡಿರುವ ವ್ಯಕ್ತಿಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ರಾಪಿಡೋ, ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಮತ್ತು ಟೈಗರ್ ಶ್ರಾಫ್ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ನಿರಾಳವಾಗಿದೆ.
ಇದನ್ನೂ ಓದಿ:ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆರೋಪಿ ಅನಿಲ್ ಪಂಡಿತ್ ಮೇಲಿವೆ 12ಕ್ಕೂ ಹೆಚ್ಚು ಕೇಸ್
‘ಮಿಸ್ಟರ್ ಟೈಗರ್ ಶ್ರಾಫ್ ಮತ್ತು ಅವರ ತಂಡದವರನ್ನೊಳಗೊಂಡ ಈ ಘಟನೆಯ ಬಗ್ಗೆ ನಮಗೆ ತೀವ್ರ ಕಳವಳವಿದೆ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂಬುದು ನಮಗೆ ಸಮಾಧಾನ ತಂದಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ರಾಪಿಡೋ ಪ್ಲಾಟ್ಫಾರ್ಮ್ನಲ್ಲಿ ‘ಕ್ಯಾಪ್ಟನ್’ ಆಗಿ ನೋಂದಾಯಿಸಿಕೊಂಡಿರುವ ವ್ಯಕ್ತಿಯೊಬ್ಬರ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಅವರು ಅಕ್ಟೋಬರ್ 14 ರಿಂದ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಕ್ಯಾಪ್ಟನ್ ಆಗಿ ಸಕ್ರಿಯವಾಗಿಲ್ಲ. ಭಾರತದ ದೊಡ್ಡ ಗಿಗ್ ಆರ್ಥಿಕತೆಯಲ್ಲಿ ಸಾಮಾನ್ಯವಿರುವಂತೆ, ವ್ಯಕ್ತಿಗಳು ಒಂದೇ ಸಮಯದಲ್ಲಿ ಹಲವಾರು ಪ್ಲಾಟ್ಫಾರ್ಮ್ಗಳಲ್ಲಿ ನೋಂದಾಯಿಸಿಕೊಂಡಿರಬಹುದು. ಘಟನೆಯ ದಿನದಂದು, ಸದರಿ ವ್ಯಕ್ತಿಯು ರಾಪಿಡೋ ಸೇವೆಯನ್ನು ಗ್ರಾಹಕರಾಗಿ ಬಳಸಿಕೊಂಡಿದ್ದರು. ನಾವು ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರ ತನಿಖೆಗೆ ಬೆಂಬಲ ನೀಡುತ್ತಿದ್ದೇವೆ’ ’ ಎಂದಿದೆ.
‘ನಾವು ತಕ್ಷಣವೇ ಪ್ರತಿಕ್ರಿಯಿಸಿದ್ದೇವೆ ಮತ್ತು ನಮ್ಮಿಂದ ಕೋರಲಾದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ರಾಪಿಡೋ ಹಿಂಸಾಚಾರ ಅಥವಾ ಅಪರಾಧ ಚಟುವಟಿಕೆಗಳ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದೆ ಮತ್ತು ನಾವು ನಮ್ಮ ಸಂಪೂರ್ಣ ಸಹಕಾರವನ್ನು ಮುಂದುವರಿಸುತ್ತೇವೆ’ ಎಂದು ರ್ಯಾಪಿಡೊ ಹೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Tue, 20 October 26




