ರಶ್ಮಿಕಾ ಮಂದಣ್ಣ ಭಾಷೆಯ ಕಾರಣಕ್ಕೆ ಆಗಾಗ್ಗೆ ಋಣಾತ್ಮಕವಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೆ ಮುಂಬೈನ ಸುದ್ದಿಗೋಷ್ಠಿಯೊಂದರಲ್ಲಿ ನಾನು ಹೈದರಾಬಾದಿನವಳು ಎಂದಿದ್ದು ಕನ್ನಡಿಗರ ಟೀಕೆಗೆ ಗುರಿಯಾಗಿತ್ತು. ಬಹಳ ಹಿಂದೊಮ್ಮೆ ನನಗೆ ಕನ್ನಡ ಭಾಷೆ ಮಾತನಾಡಲು ಬರಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಭಾಷೆಯ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಈಗ ಬಾರಿ ಸಲ್ಮಾನ್ ಖಾನ್, ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ಹೇಳಿದ್ದಾರೆ.
‘ಸಿಖಂಧರ್’ ಸಿನಿಮಾದ ಪ್ರಚಾರದಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಭಾಗಿ ಆಗಿದ್ದಾರೆ. ಇಬ್ಬರೂ ಒಟ್ಟಿಗೆ ಹಲವು ಸಂದರ್ಶನಗಳನ್ನು ನೀಡಿದ್ದಾರೆ. ಅಂಥಹುದೇ ಒಂದು ಸಂದರ್ಶನದಲ್ಲಿ ಸಂದರ್ಶಕ ಭಾಷೆಯ ವಿಷಯ ಚರ್ಚೆಗೆ ಎಳೆದರು. ಈ ವೇಳೆ ತುಸು ವಿವರವಾಗಿ ವಿವರಣೆ ನೀಡಿದ ರಶ್ಮಿಕಾ ಮಂದಣ್ಣ, ಯಾವುದೇ ವ್ಯಕ್ತಿ ತನ್ನ ಸುತ್ತ-ಮುತ್ತ ಮಾತನಾಡಲಾಗುತ್ತಿರುವ ಭಾಷೆಯನ್ನು ಬಲು ಬೇಗ ಕಲಿಯುತ್ತಾರೆ. ನನ್ನದು ಕರ್ನಾಟಕದ ಕೊಡಗು ಹಾಗಾಗಿ ನನಗೆ ಕನ್ನಡ ಭಾಷೆ ಸುಲಭವಾಗಿ ಬರುತ್ತದೆ’ ಎಂದಿದ್ದಾರೆ.
ಆ ನಂತರ ನಾನು ಹೈದರಾಬಾದ್ಗೆ ಸ್ಥಳಾಂತರವಾದೆ. ಅಲ್ಲಿ ನನ್ನ ಕೆಲಸದವರು, ಗೆಳೆಯರು ಎಲ್ಲರೂ ತೆಲುಗಿನವರು ಹಾಗಾಗಿ ನಾನು ಸಹ ಬಹು ಬೇಗ ತೆಲುಗು ಕಲಿತುಕೊಂಡೆ. ಈಗ ಕೆಲಸಕ್ಕಾಗಿ ಮುಂಬೈಗೆ ಬಂದಿದ್ದೇನೆ. ನಾನು ಇಲ್ಲಿ ಹಿಂದಿ ಮಾತನಾಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನಾನು ಬಹಳ ಎಚ್ಚರಪೂರ್ವಕವಾಗಿ ಹಿಂದಿ ಮಾತನಾಡುತ್ತೇನೆ. ಏಕೆಂದರೆ ನಾನು ಮಾತನಾಡುವಾಗ ತಪ್ಪು ಮಾಡಿಬಿಡುತ್ತೇನೋ ಎಂಬ ಭಯ ನನ್ನನ್ನು ಕಾಡುತ್ತಿರುತ್ತದೆ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ‘ಸಿಕಂದರ್’ ಟ್ರೇಲರ್ ಲಾಂಚ್ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ
‘ಒಂದೊಮ್ಮೆ ಇಲ್ಲಿಯೂ ನನ್ನ ಸುತ್ತ ಹಿಂದಿ ಮಾತನಾಡುವವರೇ ಹೆಚ್ಚಿಗಿದ್ದರೆ, ಸ್ವಲ್ಪ ಸಮಯದಲ್ಲಿ ನಾನು ಹಿಂದಿ ಕಲಿಯಬಲ್ಲನೇನೋ’ ಎಂದರು ರಶ್ಮಿಕಾ. ಅಷ್ಟು ಸಮಯ ಪಕ್ಕದಲ್ಲೇ ಕೂತು ರಶ್ಮಿಕಾರ ಮಾತು ಕೇಳಿಸಿಕೊಳ್ಳುತ್ತಿದ್ದ ಸಲ್ಮಾನ್ ಖಾನ್, ‘ಅದು ಸಾಧ್ಯವಿಲ್ಲ ಬಿಡಿ, ಏಕೆಂದರೆ ಇಲ್ಲಿ ನಿಮ್ಮ ಸುತ್ತ ಮುತ್ತ ಇರುವ ಸಿಬ್ಬಂದಿ ಎಲ್ಲ (ಸೆಟ್ನಲ್ಲಿ) ಇಂಗ್ಲೀಷ್ ಹೆಚ್ಚಾಗಿ ಮಾತನಾಡುತ್ತಾರೆ. ಹಾಗಿದ್ದಾಗ ನೀವು ಬೇಗ ಹಿಂದಿ ಕಲಿಯಲು ಹೇಗೆ ಸಾಧ್ಯ?’ ಎಂದರು. ಸಲ್ಮಾನ್ ಖಾನ್ರ ಮಾತಿಗೆ ಹೌದು ಇದು ನಿಜ ಎಂದರು ರಶ್ಮಿಕಾ ಮಂದಣ್ಣ.
ಹಿಂದಿ ಸಿನಿಮಾ ಸೆಟ್ಗಳಲ್ಲಿ ಇಂಗ್ಲೀಷ್ ಭಾಷೆಯೇ ಹೆಚ್ಚಾಗಿ ಬಳಕೆ ಆಗುತ್ತದೆ ಎಂಬುದರ ಬಗ್ಗೆ ಈ ಹಿಂದೆ ನವಾಜುದ್ದೀನ್ ಸಿದ್ಧಿಕಿ ಸಹ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದೀಗ ಸಲ್ಮಾನ್ ಖಾನ್ ಸಹ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಈ ಹಿಂದಿ ಈ ಬಗ್ಗೆ ಟೀಕೆ ಮಾಡಿದ್ದರು. ‘ನಾವು ಹಿಂದಿ ಸಿನಿಮಾ ಮಾಡುತ್ತಿದ್ದೇವೆಯೊ ಅಥವಾ ಇಂಗ್ಲೀಷ್ ಸಿನಿಮಾ ಮಾಡುತ್ತಿದ್ದೇವೆಯೋ?’ ಎಂದು ಪ್ರಶ್ನೆ ಮಾಡಿದ್ದರು ಅವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sun, 30 March 25