ಅದ್ದೂರಿ ಬಜೆಟ್ನಲ್ಲಿ ನಿರ್ಮಾಣವಾದ ‘ಆದಿಪುರುಷ್’ (Adipurush) ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಜೂನ್ 16ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಪ್ರಭಾಸ್ ಅಭಿಮಾನಿಗಳು ತುಂಬ ಗ್ರ್ಯಾಂಡ್ ಆಗಿ ಈ ಚಿತ್ರಕ್ಕೆ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಇದು ರಾಮಾಯಣ (Ramayana) ಆಧಾರಿತ ಸಿನಿಮಾ ಆದ್ದರಿಂದ ಫ್ಯಾಮಿಲಿ ಪ್ರೇಕ್ಷಕರು ಬಹಳ ಆಸಕ್ತಿ ತೋರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಬಹಳ ಭಕ್ತಿ ಭಾವದಿಂದ ನೋಡುವಂಥ ಪ್ರೇಕ್ಷಕರೂ ಇರುತ್ತಾರೆ. ‘ಆದಿಪುರುಷ್’ ಪ್ರದರ್ಶನ ಕಾಣುವ ಎಲ್ಲ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಒಂದು ಸೀಟನ್ನು ಆಂಜನೇಯನಿಗೆ (Lord Hanuman) ಮೀಸಲಾಗಿ ಇಡುವ ಬಗ್ಗೆ ಇತ್ತೀಚೆಗೆ ಸುದ್ದಿ ಕೇಳಿಬಂದಿತ್ತು. ಆ ಸೀಟು ಹೇಗಿರಲಿದೆ ಎಂಬ ಬಗ್ಗೆ ಈಗ ಮಾಹಿತಿ ಲಭ್ಯವಾಗಿದೆ. ಸಿನಿಮಾ ಪ್ರದರ್ಶನದ ವೇಳೆ ಹನುಮನಿಗೆ ಪುಷ್ಪಾರ್ಚನೆ ಆಗಲಿದೆ ಎಂಬುದು ವಿಶೇಷ.
ಹನುಮಂತನಿಗಾಗಿ ಮೀಸಲಾಗಿ ಇರುವ ಸೀಟನ್ನು ಖಾಲಿ ಬಿಟ್ಟಿರುವುದಿಲ್ಲ. ಅದರ ಮೇಲೆ ಒಂದು ಪೀಠವನ್ನು ಇರಿಸಿ, ಅಲ್ಲಿ ಆಂಜನೇಯನ ಫೋಟೋ ಅಥವಾ ಮೂರ್ತಿಯನ್ನು ಇಡಲಾಗುವುದು. ಸಿನಿಮಾ ಪ್ರದರ್ಶನಕ್ಕೂ ಮುನ್ನ ಪುಷ್ಪಾರ್ಚನೆ ಮಾಡಲಾಗುವುದು. ಈ ಎಲ್ಲ ಕಾರಣಗಳಿಂದಾಗಿ ರಾಮ ಭಕ್ತರಿಗೆ ಹಾಗೂ ಆಂಜನೇಯನ ಭಕ್ತರಿಗೆ ಈ ಸಿನಿಮಾ ಬಹಳ ವಿಶೇಷ ಎನಿಸಿಕೊಳ್ಳಲಿದೆ. ಮೊದಲ ದಿನ ಸಖತ್ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Adipurush: ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ
ರಾಮನ ಆರಾಧನೆ ನಡೆಯುವ ಸ್ಥಳದಲ್ಲಿ ಆಂಜನೇಯ ಬರುತ್ತಾನೆ ಎಂಬ ನಂಬಿಕೆ ಅನೇಕರಿಗೆ ಇದೆ. ‘ಆದಿಪುರುಷ್’ ಚಿತ್ರದಲ್ಲೂ ಶ್ರೀರಾಮನ ಗುಣಗಾನವನ್ನು ಮಾಡುವ ದೃಶ್ಯಗಳು ಇವೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ‘ಆದಿಪುರುಷ್’ ಬಿತ್ತರ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಚಿತ್ರತಂಡದ್ದು. ಆ ಕಾರಣದಿಂದ ಒಂದು ಸೀಟನ್ನು ಆಂಜನೇಯನಿಗಾಗಿ ಮೀಸಲಿಡಲಾಗುವುದು. ‘ಆದಿಪುರುಷ್’ ಚಿತ್ರದಲ್ಲಿ ಬಾಲಿವುಡ್ ನಟ ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಮಾಡಿದ್ದು, ‘ತಾನಾಜಿ’ ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಮತ್ತೊಂದು ಗೆಲುವಿಗಾಗಿ ಅವರು ಕಾದಿದ್ದಾರೆ.
ಇದನ್ನೂ ಓದಿ: Adipurush: 2250 ರೂಪಾಯಿಗೆ ಏರಿತು ‘ಆದಿಪುರುಷ್’ ಸಿನಿಮಾ ಟಿಕೆಟ್ ಬೆಲೆ; ಮುಗಿಬಿದ್ದು ಖರೀದಿಸಿದ ಪ್ರೇಕ್ಷಕರು
ಮೊದಲ ದಿನ ‘ಆದಿಪುರುಷ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈಗ ಟಿಕೆಟ್ ಬುಕಿಂಗ್ಗೆ ಸಿನಿಪ್ರಿಯರು ತೋರಿಸುತ್ತಿರುವ ಆಸಕ್ತಿ ನೋಡಿದರೆ ಭರ್ಜರಿ ಕಲೆಕ್ಷನ್ ಆಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ‘ಆದಿಪುರುಷ್’ ತೆರೆಕಾಣಲಿದೆ. ಈ ಸಿನಿಮಾದ ಅವಧಿ ಬರೋಬ್ಬರಿ 2 ಗಂಟೆ 59 ನಿಮಿಷಗಳು. ಅಂದರೆ, 3 ಗಂಟೆಗೆ ಒಂದು ನಿಮಿಷ ಮಾತ್ರ ಬಾಕಿ. ಇಂಟರ್ವಲ್ ಸಮಯವನ್ನೂ ಸೇರಿಸಿದರೆ ಈ ಚಿತ್ರದ ಪ್ರದರ್ಶನಕ್ಕೆ 3 ಗಂಟೆ 15 ನಿಮಿಷ ಹಿಡಿಯಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.