
ನಿರೀಕ್ಷಿತ ‘ರಾಮಾಯಣ‘ ಸಿನಿಮಾದ ತಾರಾಗಣವು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮ ಹೆಚ್ಚಿಸಿದೆ. ಅಮಿತಾಬ್ ಭಚ್ಚನ್ ನಡೆಸಿಕೊಡುವ ಈ ವೇದಿಕೆಯಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ತಮ್ಮ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರಕ್ಕಾಗಿ ತಾವು ಮಾಡಿದ ತಯಾರಿ ಹಾಗೂ ಪ್ರಾರ್ಥನೆಯ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ.
ಕೆಬಿಸಿ ಶೋನಲ್ಲಿ ಅಮಿತಾಭ್ ಬಚ್ಚನ್ ಅವರು ಪ್ರತಿಯೊಬ್ಬ ನಟರಿಗೂ ಈ ಮಹಾಕಾವ್ಯದ ಪಾತ್ರಗಳಿಗೆ ಆಯ್ಕೆಯಾದಾಗ ಉಂಟಾದ ಅನುಭವದ ಬಗ್ಗೆ ಕೇಳಿದರು. ಈ ವೇಳೆ ಮಾತನಾಡಿದ ಸಾಯಿ ಪಲ್ಲವಿ, ತಾವೇನು ಲೆಕ್ಕಾಚಾರ ಹಾಕಿ ಈ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದರು. ಪ್ರತಿಯೊಂದು ಪಾತ್ರ ಮಾಡುವಾಗಲೂ ಅದಕ್ಕೆ ನನ್ನ ಕೊಡುಗೆ ಏನು ಎಂದು ಯೋಚಿಸುತ್ತಿದ್ದೆ. ಆದರೆ ಸೀತಾ ಮಾತೆಯ ಪಾತ್ರ ನನಗೆ ಹೊಸ ಜ್ಞಾನವನ್ನು ನೀಡುತ್ತದೆ ಎಂದು ಭಾವಿಸಿದೆ ಎಂದರು.
ಈ ಸೀತಾ ಮಾತೆಯ ಪಾತ್ರ ಮಾಡುವಾಗ ಸಾಯಿ ಪಲ್ಲವಿ ಅವರು ಯಾವುದೇ ಮುನ್ನೆಚ್ಚರಿಕೆ ಅಥವಾ ಯೋಚನೆ ಇಟ್ಟುಕೊಳ್ಳಲಿಲ್ಲ. ಅವರು ನೇರವಾಗಿ ಸೀತಾ ಮಾತೆಗೆ ಮನಸಾರೆ ಪ್ರಾರ್ಥನೆ ಸಲ್ಲಿಸಿ ಚಿತ್ರೀಕರಣದಲ್ಲಿ ಭಾಗವಹಿಸಿದರು. ಪಾತ್ರದ ಪವಿತ್ರತೆ ಕಾಪಾಡಿಕೊಳ್ಳಲು ಈ ರೀತಿ ಪ್ರಾರ್ಥಿಸಿ ಮುನ್ನಡೆದೆ ಎಂದು ಸಾಯಿ ಪಲ್ಲವಿ ಹೇಳಿಕೊಂಡರು. ಸಾಯಿ ಪಲ್ಲವಿ ಅವರ ಈ ಮಾತುಗಳಿಗೆ ಬಿಗ್ ಬಿ ಹಾಗೂ ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಶೋನಲ್ಲಿ ರಣಬೀರ್ ಕಪೂರ್ ಅವರು ಅಮಿತಾ ಬಚ್ಚನ್ ಅವರಿಗೆ ಬಾಲ್ಯದ ದೀಪಾವಳಿ ನೆನಪುಗಳನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಬಿಗ್ ಬಿ, ಪಕ್ಕದ ಮನೆಯವರಿಗಿಂತ ನಮ್ಮ ಮನೆಯ ಪಟಾಕಿ ಹೆಚ್ಚು ಶಬ್ದ ಮಾಡಬೇಕು ಎಂಬ ಸ್ಪರ್ಧೆ ಇರುತ್ತಿತ್ತು ಎಂದು ನೆನಪಿಸಿಕೊಂಡರು. ಈ ತಮಾಷೆಯ ಮಾತನ್ನು ಕೇಳಿ ರಣಬೀರ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ಜೋರಾಗಿ ನಕ್ಕರು. ಈ ದೀಪಾವಳಿ ವಿಶೇಷ ಸಂಚಿಕೆಯು ಅಕ್ಟೋಬರ್ 29 ಮತ್ತು 30 ರಂದು ಪ್ರಸಾರವಾಗಲಿದೆ.
ಇದನ್ನೂ ಓದಿ: ‘ರಾಮಾಯಣ 2’ ರಿಲೀಸ್ ಮುಂದಕ್ಕೆ ಹೋಗುವ ವಿಷಯ ಮೊದಲೇ ಲೀಕ್ ಮಾಡಿದ್ದು ರಣಬೀರ್?
ನಿರಂಜನ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ನಟ ಯಶ್ ರಾವಣನ ಪಾತ್ರದಲ್ಲಿದ್ದರೆ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರುಣ್ ಗೋವಿಲ್ ಹಾಗೂ ಲಾರಾ ದತ್ತಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.