ಸೈಫ್ ಕೇಸ್: ತಪ್ಪು ವ್ಯಕ್ತಿ ಬಂಧಿಸಿದ್ರಾ ಮುಂಬೈ ಪೊಲೀಸರು? ಹೋಲಿಕೆ ಆಗುತ್ತಿಲ್ಲ ಬೆರಳಚ್ಚು

|

Updated on: Jan 26, 2025 | 7:48 PM

ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ನಡೆದ ದರೋಡೆ ಯತ್ನದ ಬಗ್ಗೆ ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಆ ವ್ಯಕ್ತಿಯ ಫಿಂಗರ್​ಪ್ರಿಂಟ್ ಹೋಲಿಕೆ ಆಗುತ್ತಿಲ್ಲ ಎಂಬುದು ಈಗ ತಿಳಿದು ಬಂದಿದೆ. ಹಾಗಾದರೆ ಮುಂಬೈ ಪೊಲೀಸರು ದಾರಿ ತಪ್ಪಿದ್ದಾರಾ ಎಂಬ ಅನುಮಾನ ಮೂಡಿದೆ.

ಸೈಫ್ ಕೇಸ್: ತಪ್ಪು ವ್ಯಕ್ತಿ ಬಂಧಿಸಿದ್ರಾ ಮುಂಬೈ ಪೊಲೀಸರು? ಹೋಲಿಕೆ ಆಗುತ್ತಿಲ್ಲ ಬೆರಳಚ್ಚು
Mohammad Shariful Islam Shehzad, Saif Ali Khan
Follow us on

ಬಾಲಿವುಡ್​ನ ಜನಪ್ರಿಯ ನಟ ಸೈಫ್ ಅಲಿ ಖಾನ್ ಅವರಿಗೆ ಚೂರಿ ಇರಿತ ಆದಾಗ ಎಲ್ಲರಿಗೂ ಆತಂಕ ಆಗಿತ್ತು. ಮುಂಬೈನ ಬಾಂದ್ರಾದಲ್ಲಿ ಇರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್​ಮೆಂಟ್​ಗೆ ಕಳ್ಳರು ನುಗ್ಗಿದ್ದರು. ಆ ವೇಳೆ ಸೈಫ್ ಅಲಿ ಖಾನ್ ಮೇಲೆ ಚೂಕು ಹಾಕಲಾಗಿತ್ತು. ಆ ಘಟನೆ ನಡೆದ ಕೂಡಲೇ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಸೈಫ್ ನಿವಾಸದಲ್ಲಿ ಫಿಂಗರ್​ಪ್ರಿಂಟ್​ ಸಂಗ್ರಹ ಮಾಡಲಾಗಿತ್ತು. ಬಳಿಕ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಅಚ್ಚರಿ ಏನೆಂದರೆ, ಈ ವ್ಯಕ್ತಿಯ ಜೊತೆಗೆ ಫಿಂಗರ್​ಪ್ರಿಂಟ್ ಹೋಲಿಕೆ ಆಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ವರದಿಗಳ ಪ್ರಕಾರ, ಮುಂಬೈ ಪೊಲೀಸರು ಸೈಫ್ ಅಲಿ ಖಾನ್ ಅವರ ಅಪಾರ್ಟ್​ಮೆಂಟ್​ನಲ್ಲಿ 19 ಬಗೆಯ ಬೆರಳಚ್ಚು ಸಂಗ್ರಹ ಮಾಡಿದ್ದರು. ಅವುಗಳನ್ನು ಪರಿಶೀಲಿಸಲು ಹಾಗೂ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್​ನ ಬೆರಳಚ್ಚಿನ ಜೊತೆ ಮ್ಯಾಚ್ ಆಗುತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಕ್ರಿಮಿನಲ್ ಇನ್​ವೆಸ್ಟಿಗೇಷನ್ ಡಿಪಾರ್ಟ್​ಮೆಂಟ್​ಗೆ ಕಳಿಸಲಾಗಿತ್ತು. ಅಲ್ಲಿಂದ ಬಂದ ವರದಿ ನೋಡಿ ಎಲ್ಲರಿಗೂ ಶಾಕ್ ಆಗಿದೆ.

ಕಂಪ್ಯೂಟರ್​ ಮೂಲಕ ಬೆರಳಚ್ಚು ಪರಿಶೀಲನೆ ಮಾಡಲಾಗಿದೆ. ಈ ವರದಿ ಪ್ರಕಾರ, ಮುಂಬೈ ಪೊಲೀಸರು ಸೈಫ್ ಮನೆಯಲ್ಲಿ ಸಂಗ್ರಹಿಸಿದ ಬೆರಳಚ್ಚಿಗೂ, ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್​ನ ಬೆರಳಚ್ಚಿಗೂ ತಾಳೆ ಆಗುತ್ತಿಲ್ಲ. ಹಾಗಾದರೆ ಪೊಲೀಸರು ಬಂಧಿಸಿರುವುದು ಬೇರೆಯದೇ ವ್ಯಕ್ತಿಯನ್ನಾ ಎಂಬ ಅನುಮಾನ ಸೃಷ್ಟಿಯಾಗಿದೆ. ಆದ್ದರಿಂದ ಹೆಚ್ಚಿನ ಪರೀಕ್ಷೆ ಮಾಡಲು ಇನ್ನಷ್ಟು ಫಿಂಗರ್​ಪ್ರಿಂಟ್ ಸ್ಯಾಂಪಲ್​ಗಳನ್ನು ಕಳಿಸಿಕೊಡಲಾಗಿದೆ.

ಇದನ್ನೂ ಓದಿ: ಸೈಫ್ ಜೀವ ಉಳಿಸಿದ ಆಟೋ ಚಾಲಕನಿಗೆ 1 ಲಕ್ಷ ರೂ. ಬಹುಮಾನ ಕೊಟ್ಟ ಮಿಕಾ ಸಿಂಗ್

ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್​ ಬಾಂಗ್ಲಾದೇಶ ಮೂಲದವನು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆರೋಪಿ ಪರ ವಕೀಲರು ವಾದ ಮಾಡಿದ್ದಾರೆ. ಇನ್ನೊಂದು ಪ್ರಮುಖ ಅಂಶ ಏನೆಂದರೆ, ಸೈಫ್ ಮನೆಯ ಸಿಸಿಟಿವಿಯಲ್ಲಿ ಕಾಣಿಸಿದ ವ್ಯಕ್ತಿಯ ಮುಖಕ್ಕೂ, ಮುಂಬೈ ಪೊಲೀಸರು ಅರೆಸ್ಟ್​ ಮಾಡಿದ ವ್ಯಕ್ತಿಯ ಮಖಕ್ಕೂ ಸಾಮ್ಯತೆಯೇ ಇಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಇದರಿಂದಾಗಿ ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿದೆ. ನಿಜವಾದ ಆರೋಪಿ ಎಲ್ಲಿದ್ದಾನೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.