ಆಸ್ಪತ್ರೆಗೆ ಕರೆದುಕೊಂಡ ಹೋಗಿ ಜೀವ ಉಳಿಸಿದ ಆಟೋ ಚಾಲಕನ ಭೇಟಿ ಮಾಡಿದ ಸೈಫ್
ನಟ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೂರಿ ಇರಿತಕ್ಕೆ ಒಳಗಾಗಿದ್ದಾಗ ತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಆಟೋ ಚಾಲಕನಿಗೆ ಅವರು ಈಗ ಕೃತಜ್ಞತೆ ಸಲ್ಲಿಸಿದ್ದಾರೆ. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಂತರ ಸೈಫ್ ಅಲಿ ಖಾನ್ ಅವರು ಆಟೋ ಚಾಲಕನನ್ನು ಭೇಟಿ ಮಾಡಿದ್ದಾರೆ. ಫೋಟೋಗಳು ವೈರಲ್ ಆಗಿವೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಜನವರಿ 16ರಂದು ಕೆಟ್ಟ ದಿನವಾಗಿತ್ತು. ಅಂದು ಅವರ ಮನೆಗೆ ನುಗ್ಗಿದ್ದ ದರೋಡೆಕೋರರು ಚಾಕು ಇರಿದಿದ್ದರು. ಆ ಘಟನೆ ನಡೆದಾಗ ಸೈಫ್ ಅಲಿ ಖಾನ್ ಅವರ ಸಹಾಯಕ್ಕೆ ಬಂದಿದ್ದು ಓರ್ವ ಆಟೋ ಚಾಲಕ. ಐಷಾರಾಮಿ ಕಾರುಗಳು ಇದ್ದರೂ, ದೊಡ್ಡ ದೊಡ್ಡ ಮಂದಿಯ ಸಂಪರ್ಕ ಇದ್ದರೂ, ಕೋಟ್ಯಂತರ ರೂಪಾಯಿ ಹಣ ಇದ್ದರೂ ಕೂಡ ಸೈಫ್ಗೆ ಅಂದು ದೇವರ ರೀತಿಯಲ್ಲಿ ಬಂದಿದ್ದೇ ಈ ಆಟೋ ಡ್ರೈವರ್. ಈಗ ಆ ವ್ಯಕ್ತಿಯನ್ನು ಸೈಫ್ ಅಲಿ ಖಾನ್ ಭೇಟಿಯಾಗಿ ಕೃತಜ್ಞತೆ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಆಟೋ ಚಾಲಕನ ಹೆಸರು ಭಜನ್ ಸಿಂಗ್ ರಾಣ. ಜನವರಿ 21ರಂದು ಲೀಲಾವತಿ ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಅವರು ಡಿಸ್ಚಾರ್ಜ್ ಆದರು. ಡಿಸ್ಚಾರ್ಜ್ ಆಗುವುದಕ್ಕೂ ಮುನ್ನ ಅವರು ಭಜನ್ ಸಿಂಗ್ ರಾಣ ಜೊತೆ ಮಾತುಕಥೆ ಮಾಡಿದರು. ಆಪತ್ತಿನಲ್ಲಿ ಸಹಾಯಕ್ಕೆ ಬಂದ ವ್ಯಕ್ತಿಯನ್ನು ಸೈಫ್ ಮರೆತಿಲ್ಲ. ಅವರ ಈ ನಡೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಈ ಭೇಟಿಯ ಬಳಿಕ ಭಜನ್ ಸಿಂಗ್ ರಾಣ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇಂದು ನನ್ನನ್ನು ಆಹ್ವಾನಿಸಿದ್ದರು. ಅದರಿಂದ ನನಗೆ ತುಂಬ ಖುಷಿ ಆಯಿತು. ವಿಶೇಷ ಏನೂ ಇಲ್ಲ. ಇದೊಂದು ಸಾಮಾನ್ಯ ಭೇಟಿ. ಬೇಗ ಗುಣಮುಖರಾಗಲಿ ಅಂತ ಅಂದು ಪಾರ್ಥಿಸಿದ್ದೆ. ಇಂದು ಕೂಡ ಅದೇ ರೀತಿ ಪ್ರಾರ್ಥನೆ ಮಾಡಿದ್ದೇನೆ ಎಂದು ಅವರಿಗೆ ನಾನು ಹೇಳಿದೆ’ ಎಂದಿದ್ದಾರೆ ಆಟೋ ಚಾಲಕ ಭಜನ್ ಸಿಂಗ್ ರಾಣ.
ಇದನ್ನೂ ಓದಿ: ಆಸ್ಪತ್ರೆಯಿಂದ ಸೈಫ್ ಡಿಸ್ಚಾರ್ಜ್, ಸ್ಟೈಲ್ ಆಗಿ ನಡೆಯುತ್ತಾ ಮನೆ ಸೇರಿದ ನಟ
ಅಚ್ಚರಿ ಏನೆಂದರೆ, ಅಂದು ಭಜನ್ ಸಿಂಗ್ ರಾಣ ಅವರು ಸೈಫ್ ಅಲಿ ಖಾನ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗುವಾಗ ತನ್ನ ಆಟೋದಲ್ಲಿ ಕುಳಿತಿರುವುದು ಸೈಫ್ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಏನೋ ಅವಘಡ ಆಗಿದೆ ಎಂಬುದು ಮಾತ್ರ ಅವರಿಗೆ ಗೊತ್ತಿತ್ತು. ಈ ಅವಘಡಲ್ಲಿ ತಾವು ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೋ ಎಂಬ ಭಯ ಅವರಿಗೆ ಇತ್ತು. ಆ ಭಯದಲ್ಲೂ ಅವರು ಸಹಾಯಕ್ಕೆ ಧಾವಿಸಿದ್ದರು. ಇಂದು ಅವರಿಗೆ ಎಲ್ಲರಿಂದ ಪ್ರಶಂಸೆ ಕೇಳಿಬರುತ್ತಿವೆ. ಚಿಕಿತ್ಸೆ ಪಡೆದ ಬಳಿಕ ಸೈಫ್ ಅಲಿ ಖಾನ್ ಅವರನ್ನು ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.