ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್ಮೆಂಟ್ಗೆ ಕಳ್ಳರು ನುಗ್ಗಿದ್ದಾರೆ. ಇಬ್ಬರು ಖದೀಮರು ಸೈಫ್ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅನೇಕರಿಂದ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ದರೋಡೆ ಮತ್ತು ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆಯ ವಿವರಗಳು ಶಾಕಿಂಗ್ ಆಗಿವೆ. ಮಾಧ್ಯಮಗಳ ವರದಿಗಳ ಪ್ರಕಾರ, ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು ಪೊಲೀಸರ ಎದುರು ಕೆಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಫೈರ್ ಎಕ್ಸಿಟ್ ಬಳಸಿಕೊಂಡು ಸೈಫ್ ಅಲಿ ಖಾನ್ ಅವರ ಮನೆಗೆ ಕಳ್ಳರು ನುಗ್ಗಿದರು. ಗುರುವಾರ (ಜನವರಿ 16) ನಸುಕಿನ 2.30ರ ಸುಮಾರಿಗೆ ಈ ಘಟನೆ ನಡೆಯಿತು. ಆ ವೇಳೆಗೆ ಮನೆಯಲ್ಲಿ ಇದ್ದ ಎಲ್ಲರೂ ಮಲಗಿದ್ದರು. ಸೈಫ್ ಅಲಿ ಖಾನ್ ಪುತ್ರ ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ ಎಂದು ನರ್ಸ್ ಹೇಳಿದ್ದಾರೆ.
ಆದರೆ ಅಷ್ಟು ಹಣವನ್ನು ನೀಡಲು ನರ್ಸ್ ನಿರಾಕರಿಸಿದರು. ಆಗ ಅವರ ಮೇಲೆ ಕಳ್ಳ ಅಟ್ಯಾಕ್ ಮಾಡಿದ. ಅದರಿಂದ ನರ್ಸ್ಗೆ ಸಾಕಷ್ಟು ಗಾಯಗಳಾದವು. ಚಾಕು ಮತ್ತು ಕೋಲನ್ನು ಆ ಖದೀಮ ಹಿಡಿದುಕೊಂಡಿದ್ದ. ಅಂದಾಜು 35 ವರ್ಷ ವಯಸ್ಸಿನ ಆ ವ್ಯಕ್ತಿಯ ಚಹರೆ ಹೇಗಿತ್ತು ಎಂಬುದನ್ನು ಪೊಲೀಸರ ಎದುರು ನರ್ಸ್ ಹೇಳಿದ್ದಾರೆ. ಈಗಾಗಲೇ ಆತನ ಗುರುತು ಪತ್ತೆ ಆಗಿದ್ದು, ಶೀಘ್ರದಲ್ಲೇ ಬಂದಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ಗೆ ಚಾಕು ಇರಿತ: ಶಂಕಿತ ವ್ಯಕ್ತಿಯ ಫೋಟೋ ಬಹಿರಂಗ
ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ನುಗ್ಗಿದ್ದ ಕಳ್ಳ ಈ ರೀತಿ ದಾಂದಲೆ ಮಾಡಿದಾಗ ಇಡೀ ಮನೆಯಲ್ಲಿ ಇದ್ದವರಿಗೆ ಎಚ್ಚರ ಆಯಿತು. ಆಗ ಸೈಫ್ ಅಲಿ ಖಾನ್ ಅವರು ಹೆಂಡತಿ, ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿರು. ಆ ಸಂದರ್ಭದಲ್ಲಿ ಸೈಫ್ ಮೇಲೆ ಕಳ್ಳ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ಸೈಫ್ ಅವರಿಗೆ ಅನೇಕ ಗಂಭೀರ ಗಾಯಗಳು ಆಗಿವೆ. ಮನೆಯಲ್ಲಿ ಇರುವ ಇನ್ನೂ ಹೆಚ್ಚಿನ ಸಿಬ್ಬಂದಿ ಆಗಮಿಸುವುದರೊಳಗೆ ಕಳ್ಳ ಎಸ್ಕೇಪ್ ಆಗಿದ್ದಾನೆ. ಸೈಫ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಸರ್ಜರಿ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.