ಮದುವೆ ನಂತರ ನಟಿಯರ ಬದುಕು ಬದಲಾಗುತ್ತದೆ. ಆದ್ಯತೆಗಳು, ಆಯ್ಕೆಗಳ ಜೊತೆಗೆ ದಿನಚರಿ ಕೂಡ ಚೇಂಜ್ ಆಗುತ್ತದೆ. ತಮ್ಮ ಬದುಕಿನಲ್ಲಿ ಆದ ಬದಲಾವಣೆ ಕುರಿತು ನಟಿ ಕಾಜೋಲ್ (Kajol) ಅವರು ಈಗ ಹೇಳಿಕೊಂಡಿದ್ದಾರೆ. ಮದುವೆ ನಂತರವೂ ಅವರು ಸಿನಿಮಾಗಳಿಂದ ದೂರ ಉಳಿಯಲಿಲ್ಲ. ಇಂದಿಗೂ ಕಾಜೋಲ್ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾರೆ. ಅಲ್ಲದೇ, ಪತಿ ಅಜಯ್ ದೇವಗನ್ ಅವರ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅಜಯ್ ದೇವಗನ್ (Ajay Devgn) ಜೊತೆ ಮದುವೆ ಆದ ನಂತರದ ಎರಡು ತಿಂಗಳಲ್ಲಿ ಕಾಜೋಲ್ ಅವರ ದೇಹದ ತೂಕ ಬರೋಬ್ಬರಿ 8 ಕೆಜಿ ಹೆಚ್ಚಾಗಿತ್ತು. ಅದಕ್ಕೆ ಕಾರಣ ಏನು ಎಂಬುದನ್ನು ಅವರೀಗ ವಿವರಿಸಿದ್ದಾರೆ.
1999ರ ಫೆಬ್ರವರಿ 24ರಂದು ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಮದುವೆ ಆಯಿತು. ತುಂಬ ಸರಳವಾಗಿ ವಿವಾಹ ಸಮಾರಂಭ ನಡೆಯಿತು. ಮದುವೆ ಬಳಿಕ ಕಾಜೋಲ್ ಅವರ ಆಹಾರ ಪದ್ಧತಿ ಬದಲಾಯಿತು. ಪ್ರತಿ ದಿನ ಅವರು ಬಗೆಬಗೆಯ ಪರೋಟ ತಿನ್ನಲು ಶುರು ಮಾಡಿದರು. 2 ತಿಂಗಳಲ್ಲಿ 8 ಕೆಜಿ ದೇಹದ ತೂಕ ಹೆಚ್ಚಾಗಲು ಅದೇ ಕಾರಣ ಎಂದು ಕಾಜೋಲ್ ಹೇಳಿದ್ದಾರೆ.
‘ಪ್ರತಿ ದಿನ ನಮ್ಮ ಡೈನಿಂಗ್ ಟೇಬಲ್ ಮೇಲೆ ಬಗೆಬಗೆಯ ಪರೋಟ ಇರುತ್ತಿತ್ತು. ಗೋಬಿ ಪರೋಟ, ಪನೀರ್ ಪರೋಟ, ಆಲು ಪರೋಟ. ಅದರ ಜೊತೆಗೆ ಬೆಣ್ಣೆ ಕೂಡ ಇರುತ್ತಿತ್ತು. ಆ ಸಮಯದಲ್ಲಿ ಹೇಗೆ ಡಯೆಟ್ ಮಾಡಬೇಕು ಎಂಬುದು ಸಹ ನನಗೆ ತಿಳಿದಿರಲಿಲ್ಲ’ ಎಂದು ಕಾಜೋಲ್ ಹೇಳಿದ್ದಾರೆ. ಆಹಾರಪ್ರಿಯೆ ಆಗಿರುವ ಅವರು ಮನೆಯಲ್ಲಿ ಈಗಲೂ ಬಗೆಬಗೆಯ ಅಡುಗೆ ಮಾಡುತ್ತಾರೆ.
ಇದನ್ನೂ ಓದಿ: Kajol: ಮಾಸ್ಕ್ ತೆಗೆಯಬೇಕು ಎಂದು ಜಯಾ ಬಚ್ಚನ್ಗೆ ಒತ್ತಾಯ ಮಾಡಿದ ಕಾಜೋಲ್; ನೆಟ್ಟಿಗರ ಪ್ರತಿಕ್ರಿಯೆ ಏನು?
ಸಿನಿಮಾಗಳ ಆಯ್ಕೆಯಲ್ಲಿ ಕಾಜೋಲ್ ಅವರು ತುಂಬ ಚ್ಯೂಸಿ ಆಗಿದ್ದಾರೆ. ತಮಗೆ ಇಷ್ಟ ಆಗುವಂತಹ ಸ್ಕ್ರಿಪ್ಟ್ಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಅವರನ್ನು ಮತ್ತೆ ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಕಾಜೋಲ್ ನಟಿಸಿರುವ ಹೊಸ ಸಿನಿಮಾ ‘ಸಲಾಂ ವೆಂಕಿ’ ಈ ವಾರ (ಡಿ.9) ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ: Kajol: ಒಟಿಟಿ ಜಗತ್ತಿಗೆ ನಟಿ ಕಾಜೋಲ್ ಎಂಟ್ರಿ; ಪ್ರತಿ ಎಪಿಸೋಡ್ಗೆ ಪಡೆಯುವ ಸಂಭಾವನೆ ಇಷ್ಟೊಂದಾ?
‘ಸಲಾಂ ವೆಂಕಿ’ ಚಿತ್ರಕ್ಕೆ ರೇವತಿ ನಿರ್ದೇಶನ ಮಾಡಿದ್ದಾರೆ. ಕಾಜೋಲ್ ಜೊತೆ ವಿಶಾಲ್ ಜೇತ್ವಾ ನಟಿಸಿದ್ದಾರೆ. ವ್ಹೀಲ್ ಚೇರ್ನಲ್ಲಿ ಇರುವ ಮಗನಿಗಾಗಿ ಕಷ್ಟಪಡುವ ತಾಯಿಯ ಪಾತ್ರವನ್ನು ಕಾಜೋಲ್ ಮಾಡಿದ್ದಾರೆ. ಆಮಿರ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರದ ಟ್ರೇಲರ್ ನೋಡಿದ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.