Kajol: ಮಾಸ್ಕ್ ತೆಗೆಯಬೇಕು ಎಂದು ಜಯಾ ಬಚ್ಚನ್ಗೆ ಒತ್ತಾಯ ಮಾಡಿದ ಕಾಜೋಲ್; ನೆಟ್ಟಿಗರ ಪ್ರತಿಕ್ರಿಯೆ ಏನು?
Jaya Bachchan: ದುರ್ಗಾ ಪೂಜೆಗೆ ಬಂದಿದ್ದ ಅನೇಕ ಸೆಲೆಬ್ರಿಟಿಗಳು ಮಾಸ್ಕ್ ಧರಿಸಿರಲಿಲ್ಲ. ಆದರೆ ಜಯಾ ಬಚ್ಚನ್ ಅವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಹಾಕಿಕೊಂಡಿದ್ದರು.
ಎಲ್ಲೆಡೆ ನವರಾತ್ರಿ ಮತ್ತು ದುರ್ಗಾ ಪೂಜೆಯನ್ನು (Durga Puja) ಸಡಗರದಿಂದ ಆಚರಿಸಲಾಗುತ್ತಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಬಾಲಿವುಡ್ನ ಅನೇಕ ನಟ-ನಟಿಯರು ದುರ್ಗಾ ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಮುಂಬೈನ ಜುಹೂನಲ್ಲಿ ಅದ್ದೂರಿಯಾಗಿ ದುರ್ಗಾ ಪೂಜೆ ಮಾಡಲಾಗುತ್ತಿದೆ. ಇದರಲ್ಲಿ ಕಾಜೋಲ್, ಜಯಾ ಬಚ್ಚನ್ (Jaya Bachchan), ರಾಣಿ ಮುಖರ್ಜಿ, ಮೌನಿ ರಾಯ್, ಅಯಾನ್ ಮುಖರ್ಜಿ, ರೂಪಾಲಿ ಗಂಗೂಲಿ ಮುಂತಾದವರು ಭಾಗವಹಿಸಿದ್ದಾರೆ. ಈ ವೇಳೆ ಜಯ ಬಚ್ಚನ್ ಅವರು ಮಾಸ್ಕ್ ತೆಗೆಯಬೇಕು ಎಂದು ಕಾಜೋಲ್ (Kajol) ಒತ್ತಾಯ ಮಾಡಿದ್ದು ಫನ್ನಿಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೊರೊನಾ ಹಾವಳಿ ಕಮ್ಮಿ ಆಗಿದೆ. ಮಾಸ್ಕ್ ಕಡ್ಡಾಯ ಎಂಬ ನಿಯಮ ಕೂಡ ಇಲ್ಲ. ಹಾಗಾಗಿ ದುರ್ಗಾ ಪೂಜೆಗೆ ಬಂದಿದ್ದ ಅನೇಕ ಸೆಲೆಬ್ರಿಟಿಗಳು ಮಾಸ್ಕ್ ಧರಿಸಿರಲಿಲ್ಲ. ಆದರೆ ಜಯಾ ಬಚ್ಚನ್ ಅವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಹಾಕಿಕೊಂಡಿದ್ದರು. ಅನೇಕ ಸೆಲೆಬ್ರಿಟಿಗಳು ಒಂದೆಡೆ ಸೇರಿದಾಗ ಪಾಪರಾಜಿಗಳಿಗೆ ಹಬ್ಬ. ಫೋಟೋ ಕ್ಲಿಕ್ಕಿಸುವ ಸಲುವಾಗಿ ಅವರು ಮುಗಿಬೀಳುತ್ತಾರೆ. ದುರ್ಗಾ ಪೂಜೆಯ ಸಮಯದಲ್ಲೂ ಹಾಗೆಯೇ ಆಗಿದೆ.
ಫೋಟೋಗೆ ಪೋಸ್ ಕೊಡುವಾಗ ಮಾಸ್ಕ್ ತೆಗೆಯಲೇ ಬೇಕು ಎಂದು ಜಯಾ ಬಚ್ಚನ್ಗೆ ಕಾಜೋಲ್ ಒತ್ತಾಯ ಮಾಡಿದರು. ಅವರ ಮಾತಿಗೆ ಬೆಲೆಕೊಟ್ಟು ಜಯಾ ಮಾಸ್ಕ್ ತೆಗೆದರು. ಎಲ್ಲರೂ ಜೊತೆ ಸೇರಿ ಫೋಟೋಗೆ ಪೋಸ್ ನೀಡಿದರು. ‘ಬೇಗ ಬೇಗ ಫೋಟೋ ತೆಗೆಯಿರಿ’ ಎಂದು ಪಾಪರಾಜಿಗಳಿಗೆ ಜಯಾ ಬಚ್ಚನ್ ಒತ್ತಾಯಿಸಿದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಜಯಾ ಬಚ್ಚನ್ ಪತಿ ಅಮಿತಾಭ್ ಬಚ್ಚನ್ ಅವರಿಗೆ ಎರಡು ಬಾರಿ ಕೊರೊನಾ ವೈರಸ್ ತಗುಲಿತ್ತು. ಅದನ್ನೇ ಕಮೆಂಟ್ ಬಾಕ್ಸ್ನಲ್ಲಿ ನೆನಪು ಮಾಡಿಕೊಂಡಿದ್ದಾರೆ ನೆಟ್ಟಿಗರು. ‘ಅಮಿತ್ ಅಂಕಲ್ಗೆ ಪದೇಪದೇ ಕೊರೊನಾ ಆಗುತ್ತಲ್ವಾ.. ಹಾಗಾಗಿ ಜಯಾಗೆ ಭಯ ಸಹಜ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಮೀಡಿಯಾ ಮುಂದೆ ಜಯಾ ಬಚ್ಚನ್ ನಕ್ಕಿದ್ದು ಕೂಡ ಬಹಳ ಅಪರೂಪ’ ಎಂಬ ಕಮೆಂಟ್ ಕೂಡ ಬಂದಿದೆ.
2020ರಲ್ಲಿ ಅಮಿತಾಭ್ ಬಚ್ಚನ್ ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್ ತಗುಲಿತ್ತು. ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರು ಗುಣಮುಖರಾಗಿದ್ದರು. ಈ ವರ್ಷ ಆಗಸ್ಟ್ 23ರಂದು ಕೂಡ ಅವರಿಗೆ ಮತ್ತೊಮ್ಮೆ ಕೊವಿಡ್ ಪಾಸಿಟಿವ್ ಆಗಿತ್ತು. ಹಾಗಾಗಿ ಅವರ ಕುಟುಂಬದವರು ತುಂಬ ಎಚ್ಚರಿಕೆ ವಹಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Tue, 4 October 22