
ನಟ ಸಲ್ಮಾನ್ ಖಾನ್ (Salman Khan) ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಿಂದಿ ಚಿತ್ರರಂಗದಲ್ಲಿ ಅವರು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಕೆಲವು ಸಿನಿಮಾಗಳು ಸೋತಿದ್ದರೂ ಕೂಡ ಬೇಡಿಕೆ ಕಡಿಮೆ ಆಗಿಲ್ಲ. ಇತ್ತೀಚೆಗೆ ಅವರು 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಸಲ್ಮಾನ್ ಖಾನ್ ಕುರಿತ ಕೆಲವು ಇಂಟರೆಸ್ಟಿಂಗ್ ವಿಷಯಗಳು ವೈರಲ್ ಆಗಿವೆ. 2004ರಲ್ಲಿ ಹೆಚ್ಐವಿ (HIV) ಪೀಡಿತ ವ್ಯಕ್ತಿಯ ಪಾತ್ರ ಮಾಡಲು ಸಲ್ಮಾನ್ ಖಾನ್ ಕೇವಲ 1 ರೂಪಾಯಿ ಸಂಭಾವನೆ (Salman Khan Remuneration) ಪಡೆದಿದ್ದರು!
2004ರ ವೇಳೆಗೆ ಸಲ್ಮಾನ್ ಖಾನ್ ಅವರು ಸೂಪರ್ ಸ್ಟಾರ್ ಆಗಿದ್ದರು. ಆದರೂ ಕೂಡ ಅವರು ಇಂಥ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದರು. 2004ರಲ್ಲಿ ತೆರೆಕಂಡ ‘ಫಿರ್ ಮಿಲೇಂಗೆ’ ಸಿನಿಮಾಗೆ ರೇವತಿ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾಗೆ ಮುಕೇಶ್ ಉದಾಸಿ ಮತ್ತು ಶೈಲೇಂದ್ರ ಸಿಂಗ್ ಬಂಡವಾಳ ಹೂಡಿದ್ದರು. ಆ ಸಿನಿಮಾ ಬಗ್ಗೆ ಶೈಲೇಂದ್ರ ಸಿಂಗ್ ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.
‘ಆ ಸಿನಿಮಾಗೆ ಸಲ್ಮಾನ್ ಖಾನ್ ಅವರು ಕೇವಲ 1 ರೂಪಾಯಿ ಸಂಭಾವನೆ ಪಡೆದಿದ್ದರು. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಆ ಪಾತ್ರ ಸಾಯುತ್ತದೆ. ಭಾರತದ ಜನತೆಗೆ, ಅದರಲ್ಲೂ ಯುವಜನರಿಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆ ಸಿನಿಮಾ ಮಾಡಿದರು. ಸಲ್ಮಾನ್ ಖಾನ್ ಅವರು ಅಂದಿಗೂ, ಇಂದಿಗೂ ಭಾರತದ ಅತಿ ದೊಡ್ಡ ಯೂತ್ ಐಕಾನ್’ ಎಂದು ಶೈಲೇಂದ್ರ ಸಿಂಗ್ ಹೇಳಿದ್ದಾರೆ.
‘ಈ ಪಾತ್ರ ಮಾಡಲು ಇಡೀ ಹಿಂದಿ ಚಿತ್ರರಂಗದ ಎಲ್ಲ ನಟರು ನೋ ಎಂದಿದ್ದರು. ಆ ದಿನ ನಾನು ಸಲ್ಮಾನ್ ಖಾನ್ ಅವರಿಗೆ ಕರೆ ಮಾಡಿದೆ’ ಎಂದು ಆ ದಿನವನ್ನು ಶೈಲೇಂದ್ರ ಸಿಂಗ್ ಅವರು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಲಿಲ್ಲ ಎಂಬುದು ಬೇರೆ ಮಾತು. ಆದರೆ ಸಮಾಜಕ್ಕೆ ಜಾಗೃತಿ ಸಂದೇಶ ನೀಡಬೇಕು ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಅಂದು ತೆಗೆದುಕೊಂಡ ನಿರ್ಧಾರವನ್ನು ಈಗಲೂ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಫಾರ್ಮ್ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ
‘ಸಲ್ಮಾನ್ ಖಾನ್ ಅವರು ಸ್ಟಾರ್ ಆಗಿದ್ದಾಗ ಹೆಚ್ಐವಿ ಕುರಿತ ಸಿನಿಮಾದಲ್ಲಿ ನಟಿಸಲು ಅವರನ್ನು ಒಪ್ಪಿಸುವುದು ಹೇಗೆ ಅಂತ ಕಲ್ಪಿಸಿಕೊಳ್ಳಿ. ಹೆಚ್ಐವಿ ಬಂದು ಹೀರೋ ಕ್ಲೈಮ್ಯಾಕ್ಸ್ನಲ್ಲಿ ಸಾಯುತ್ತಾನೆ. ಅದರಿಂದ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಖುಷಿ ಆಗಲಿಲ್ಲ. ಆದರೆ ಆ ಸಿನಿಮಾದ ಸಂದೇಶ ಇಡೀ ದೇಶಕ್ಕೆ ತಲುಪಿತು. ಫಿರ್ ಮಿಲೇಂಗೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು ಮಾತ್ರವಲ್ಲದೇ ಸ್ಯಾಟಲೈಟ್, ಕಿರುತೆರೆ ಮತ್ತು ಕೇಬಲ್ ಮೂಲಕ ಎಲ್ಲ ಕಡೆಗಳಿಗೆ ತಲುಪಿತು’ ಎಂದಿದ್ದಾರೆ ಶೈಲೇಂದ್ರ ಸಿಂಗ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.