ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ

ಸಲೀಂ ಖಾನ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ರ ಸಲ್ಮಾನ್ ಖಾನ್ ಅವರು ಕೂಡಲೇ ಎಲ್ಲ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಬಂದಿದ್ದಾರೆ. ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸಲೀಂ ಖಾನ್ ಅವರಿಗೆ ಈಗ 90 ವರ್ಷ ವಯಸ್ಸು.

ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ
Salman Khan, Salim Khan

Updated on: Feb 17, 2026 | 10:46 PM

ಖ್ಯಾತ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (Salim Khan) ಅವರ ಆರೋಗ್ಯ ಹದಗೆಟ್ಟಿದೆ. ಇಂದು (ಫೆಬ್ರವರಿ 17) ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಹೆಲ್ತ್ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಸಲೀಂ ಖಾನ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಸೇರಿದಂತೆ ಕುಟುಂಬದ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಲೀಂ ಖಾನ್ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಧಾವಿಸಿದರು. ಮಗಳು ಅಲ್ವಿರಾ ಖಾನ್ ಅಗ್ನಿಹೋತ್ರಿ, ಅಳಿಯ ಆಯುಷ್ ಶರ್ಮಾ ಮುಂತಾದವರು ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಸಲೀಂ ಖಾನ್ ಪತ್ನಿಯರಾದ ಸಲ್ಮಾ ಖಾನ್ ಮತ್ತು ಹೆಲೆನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಈಗ ಐಸಿಯುನಲ್ಲಿ ಇರುವ ಸಲೀಂ ಖಾನ್ ಅವರ ಆರೋಗ್ಯದ ಮೇಲೆ ಬುಧವಾರ (ಫೆ.18) ಬೆಳಗ್ಗೆ 11 ಗಂಟೆವರೆಗೂ ನಿಗಾ ವಹಿಸಲಾಗುವುದು. ಆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ಸಲೀಂ ಖಾನ್ ಅವರಿಗೆ ಈಗ 90 ವರ್ಷ ವಯಸ್ಸು. ಬಾಲಿವುಡ್​ನಲ್ಲಿ ಅವರು ಬಹುಬೇಡಿಕೆಯ ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡಿದ್ದರು. ‘ಶೋಲೆ’, ‘ಜಂಜೀರ್’, ‘ದೀವಾರ್’ ಮುಂತಾದ ಸಿನಿಮಾಗಳಿಗೆ ಅವರು ಚಿತ್ರಕಥೆ ಬರೆದಿದ್ದಾರೆ. ಆ ಕಾಲದಲ್ಲಿ ಸಲೀಂ-ಜಾವೇದ್ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು.

ಇದನ್ನೂ ಓದಿ: ಸೌದಿ ಸಿನಿಮಾನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್: ಸಿನಿಮಾ ಯಾವುದು?

ಸಲೀಂ ಖಾನ್ ಅವರನ್ನು ಏಕಾಏಕಿ ಆಸ್ಪತ್ರೆಗೆ ದಾಖಲಿಸಲು ಕಾರಣ ಏನು ಎಂಬುದನ್ನು ಕುಟುಂಬದವರು ಇನ್ನೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಸಲೀಂ ಖಾನ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ 90 ವರ್ಷ ವಯಸ್ಸು ಆಗಿರುವುದರಿಂದ ಎಲ್ಲರಿಗೂ ಆತಂಕ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.