ಬಾಲಿವುಡ್ನ ಸ್ಟಾರ್ ಕಲಾವಿದ ಸಲ್ಮಾನ್ ಖಾನ್ (Salman Khan) ಅವರು ಇಂದು ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ. ಆದರೆ ಜೀವನದಲ್ಲಿ ಅವರು ಕೂಡ ಏಳು-ಬೀಳುಗಳನ್ನು ಕಂಡಿದ್ದಾರೆ. ಅವಕಾಶ ಇಲ್ಲದೇ ಕೊರಗಿದ್ದಾರೆ. ಕೈಯಲ್ಲಿ ದುಡ್ಡು ಇಲ್ಲದೇ ಕಷ್ಟಪಟ್ಟಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಪಡೆಯಲು ಏನೇನೋ ಸರ್ಕಸ್ ಮಾಡಿದ್ದಾರೆ. ಆ ಎಲ್ಲ ವಿಚಾರಗಳನ್ನು ಸಲ್ಮಾನ್ ಖಾನ್ ಅವರು ಈಗ ಬಾಯಿ ಬಿಟ್ಟಿದ್ದಾರೆ. ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ (IIFA Awards) ಸಮಾರಂಭ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಸಲ್ಲು ಮಾತನಾಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿರುವ ಅವರು ಕಣ್ಣೀರು ಹಾಕಿದ್ದಾರೆ. ತಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ‘ಐಫಾ 2022’ (IIFA 2022) ಕಾರ್ಯಕ್ರಮದ ಈ ವಿಡಿಯೋ ತುಣುಕು ಸಲ್ಮಾನ್ ಖಾನ್ ಫ್ಯಾನ್ಸ್ ಪೇಜ್ಗಳಲ್ಲಿ ವೈರಲ್ ಆಗಿದೆ.
1989ರಲ್ಲಿ ‘ಮೈನೇ ಪ್ಯಾರ್ ಕಿಯಾ’ ಸಿನಿಮಾ ಮೂಲಕ ಸಲ್ಮಾನ್ ಖಾನ್ ಹೀರೋ ಆದರು. ಆ ಚಿತ್ರದಲ್ಲಿ ನಟಿ ಭಾಗ್ಯಶ್ರೀ ಅವರು ನಾಯಕಿ ಆಗಿದ್ದರು. ಚಿತ್ರ ಸೂಪರ್ ಹಿಟ್ ಆದಾಗ ಅದರ ಎಲ್ಲ ಕ್ರೆಡಿಟ್ ಭಾಗ್ಯಶ್ರೀಗೆ ನೀಡಲಾಯಿತು. ಆದರೆ ಅವರು ಮದುವೆ ಆಗುವ ಸಲುವಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಆ ಬಳಿಕ 6 ತಿಂಗಳ ಕಾಲ ಸಲ್ಮಾನ್ ಖಾನ್ಗೆ ಯಾವುದೇ ಆಫರ್ ಬಂದಿರಲಿಲ್ಲ. ಆ ವಿಚಾರವನ್ನು ಐಫಾ ಸಮಾರಂಭದಲ್ಲಿ ಅವರು ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?
‘ಆ ಕಷ್ಟದ ಸಂದರ್ಭದಲ್ಲಿ ನಮ್ಮ ತಂದೆಯವರು ನಿರ್ಮಾಪಕ ಜಿ.ಪಿ. ಸಿಪ್ಪಿ ಅವರಿಗೆ 2 ಸಾವಿರ ರೂಪಾಯಿ ನೀಡಿ, ನನ್ನನ್ನು ಒಂದು ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವುದಾಗಿ ಮ್ಯಾಗಜಿನ್ನಲ್ಲಿ ಅನೌನ್ಸ್ ಮಾಡುವಂತೆ ಹೇಳಿದರು. ಜಿ.ಪಿ. ಸಿಪ್ಪಿ ಅವರು ಅನೌನ್ಸ್ ಮಾಡಿದರು. ಆದರೆ ಸಿನಿಮಾ ಇರಲಿಲ್ಲ. ನಂತರ ರಮೇಶ್ ತೌರಾನಿ ಅವರು ಸಿಪ್ಪಿಯವರ ಕಚೇರಿಗೆ ಬಂದು 5 ಲಕ್ಷ ರೂಪಾಯಿ ನೀಡಿದರು. ಆ ಹಣದಿಂದ ನನಗೆ ‘ಪತ್ತರ್ ಕೆ ಫೂಲ್’ ಸಿನಿಮಾದ ಅವಕಾಶ ಸಿಕ್ಕಿತು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಒಂದು ಜೊತೆ ಬಟ್ಟೆ ಕೊಂಡುಕೊಳ್ಳಲು ಕೂಡ ಸಲ್ಮಾನ್ ಖಾನ್ ಬಳಿ ಹಣ ಇರಲಿಲ್ಲ. ಆಗ ಸಹಾಯ ಮಾಡಿದ್ದು ಸುನೀಲ್ ಶೆಟ್ಟಿ. ಆ ಘಟನೆಯನ್ನು ಕೂಡ ನೆನಪು ಮಾಡಿಕೊಂಡು ಸಲ್ಲು ಎಮೋಷನಲ್ ಆಗಿದ್ದಾರೆ. ನಂತರ ಸ್ಟಾರ್ ನಟನಾಗಿ ಬೆಳೆದರೂ ಕೂಡ ಮತ್ತೆ ವೃತ್ತಿಜೀವನ ಇಳಿಮುಖ ಆಗಿತ್ತು. ಆಗ ನಿರ್ಮಾಪಕ ಬೋನಿ ಕಪೂರ್ ಅವರು ಅವಕಾಶ ನೀಡಿದರು ಎಂಬುದನ್ನು ಕೂಡ ಸಲ್ಮಾನ್ ಖಾನ್ ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.