‘ಸಲ್ಮಾನ್ ಖಾನ್ ಜನರ ಜೀವನ ಹಾಳು ಮಾಡ್ತಾರೆ’: ಆರೋಪಕ್ಕೆ ಉತ್ತರ ನೀಡಿದ ನಟ

ಚಿತ್ರರಂಗದಲ್ಲಿ ಅನೇಕರಿಗೆ ನಟ ಸಲ್ಮಾನ್ ಖಾನ್ ಅವರು ಅವಕಾಶ ನೀಡಿ ಬೆಳೆಸಿದ್ದಾರೆ ಎಂಬುದು ನಿಜ. ಆದರೆ ಇನ್ನೂ ಕೆಲವರಿಗೆ ಸಲ್ಮಾನ್ ಖಾನ್ ಅವರಿಂದ ತೊಂದರೆ ಆಗಿದೆ ಎಂಬ ಆರೋಪವೂ ಇದೆ. ‘ಬಿಗ್ ಬಾಸ್ 19’ ವೇದಿಕೆಯಲ್ಲಿ ಈ ವಿಚಾರದ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

‘ಸಲ್ಮಾನ್ ಖಾನ್ ಜನರ ಜೀವನ ಹಾಳು ಮಾಡ್ತಾರೆ’: ಆರೋಪಕ್ಕೆ ಉತ್ತರ ನೀಡಿದ ನಟ
ಸಲ್ಮಾನ್ ಖಾನ್

Updated on: Sep 08, 2025 | 4:19 PM

ನಟ ಸಲ್ಮಾನ್ ಖಾನ್ (Salman Khan) ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಬಾಲಿವುಡ್​​ನಲ್ಲಿ ಅವರು ಸ್ಟಾರ್ ಆಗಿ ಮಿಂಚಿದ್ದಾರೆ. ಬಿಗ್ ಬಾಸ್ ನಿರೂಪಣೆ ಮೂಲಕವೂ ಅವರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಸಲ್ಮಾನ್ ಖಾನ್ ಬ್ಯುಸಿ ಆಗಿದ್ದಾರೆ. ಅನೇಕರಿಗೆ ಅವರು ಅವಕಾಶ ನೀಡಿದ್ದಾರೆ. ಆದರೆ ಇನ್ನೊಂದು ಆರೋಪ ಇದೆ. ಕೆಲವರ ಜೀವನವನ್ನು ಸಲ್ಮಾನ್ ಖಾನ್ ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತದೆ. ಆ ಬಗ್ಗೆ ‘ಬಿಗ್ ಬಾಸ್ 19’ (Bigg Boss 19) ವೇದಿಕೆಯಲ್ಲಿ ಸ್ವತಃ ಸಲ್ಮಾನ್ ಖಾನ್ ಅವರು ಮಾತನಾಡಿದ್ದಾರೆ.

ಹಿಂದಿ ಬಿಗ್ ಬಾಸ್ 19ನೇ ಸೀಸನ್ ಆರಂಭ ಆಗಿದೆ. ಈ ಬಾರಿ ಕೂಡ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡುತ್ತಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ ಮಾಜಿ ಸ್ಪರ್ಧಿ ಶೆಹನಾಜ್ ಗಿಲ್ ಅವರು ವೇದಿಕೆಗೆ ಬಂದಿದ್ದರು. ಅವರು ಸಲ್ಮಾನ್ ಖಾನ್ ಜೊತೆ ಮಾತನಾಡುತ್ತಿದ್ದಾಗ ಈ ವಿಚಾರ ಪ್ರಸ್ತಾಪ ಆಯಿತು. ‘ನೀವು ಎಷ್ಟೋ ಜನರ ಜೀವನ ರೂಪಿಸಿದ್ದೀರಿ’ ಎಂದು ಶೆಹನಾಜ್ ಗಿಲ್ ಹೊಗಳಿದರು. ಆ ಮಾತಿಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದರು.

‘ನಾನು ಯಾವಾಗ ಜನರ ಜೀವನ ರೂಪಿಸಿದ್ದೇನೆ? ಜೀವನ ರೂಪಿಸುವವನು ದೇವರು. ನಾನು ಜೀವನ ಹಾಳು ಮಾಡಿದ್ದೇನೆ ಎಂದು ಕೂಡ ಕೆಲವರು ಆರೋಪ ಹೊರಿಸಿದ್ದಾರೆ. ಪ್ರಮಾಣಿಕವಾಗಿ ಹೇಳಬೇಕು ಎಂದರೆ ಅದೆಲ್ಲ ನನ್ನ ಕೈಯಲ್ಲಿ ಇಲ್ಲ. ಹಾಗೇನಾದರೂ ಮಾಡುವುದಿದ್ದರೆ ನನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇನೆ. ಮತ್ತೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುವೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.

ಈ ಮೊದಲು ಕೆಲವರು ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಅವರು ‘ಸಲ್ಮಾನ್ ಖಾನ್ ಅವರಿಂದಾಗಿ ನನ್ನ ವೃತ್ತಿಜೀವನ ಹಾಳಾಯಿತು’ ಎಂದು ಆರೋಪಿಸಿದ್ದರು. ಅದೇ ರೀತಿ ವಿವೇಕ್ ಒಬೆರಾಯ್ ಅವರ ಮೇಲೂ ಸಲ್ಮಾನ್ ಖಾನ್ ಹಗೆತನ ಸಾಧಿಸಿ ವೃತ್ತಿಜೀವನಕ್ಕೆ ತೊಂದರೆ ಕೊಟ್ಟಿದ್ದಾರೆ ಎಂಬ ಆರೋಪ ಇದೆ.

ಇದನ್ನೂ ಓದಿ: ಮಲಯಾಳಂ ನಿರ್ದೇಶಕನೊಟ್ಟಿಗೆ ಸಲ್ಮಾನ್ ಖಾನ್ ಐತಿಹಾಸಿಕ ಹಿನ್ನೆಲೆಯ ಸಿನಿಮಾ

ಗಾಯಕ ಅರಿಜಿತ್ ಸಿಂಗ್, ಸೋಮಿ ಅಲಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಆಕಾಶದೀಪ್ ಸೇಗಲ್ ಮುಂತಾದವರು ಕೂಡ ಸಲ್ಮಾನ್ ಖಾನ್ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು. ಈಗ ಬಿಗ್ ಬಾಸ್ ವೇದಿಕೆಯಲ್ಲಿ ಅವುಗಳಿಗೆಲ್ಲ ಪರೋಕ್ಷವಾಗಿ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us