‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

‘ಕಾಲಾ ಹಿರಣ್’ ಸಿನಿಮಾದ ವಿವಾದ ಜೋರಾಗಿದೆ. ‘ಇದು ಯಾವುದೇ ಬಯೋಪಿಕ್ ಅಲ್ಲ, ಇದೊಂದು ಕಲ್ಪಿತ ಚಿತ್ರ’ ಎಂದು ನಿರ್ಮಾಪಕ ಅಮಿತ್ ಜಾನಿ ವಾದಿಸುತ್ತಿದ್ದಾರೆ. ಆದರೆ ‘ಕಾಲಾ ಹಿರಣ್’ ಚಿತ್ರದ ಟೀಸರ್ ನೋಡಿದರೆ ಇದು ನೇರವಾಗಿ ನಟ ಸಲ್ಮಾನ್ ಖಾನ್ ಅವರಿಗೆ ಸಂಬಂಧಿಸಿದ ಕಥೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ
Kala Hiran Stills

Updated on: Jun 12, 2026 | 9:19 PM

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಜೀವನದ ಅತ್ಯಂತ ವಿವಾದಾತ್ಮಕ ಅಧ್ಯಾಯವಾಗಿದ್ದ 1998ರ ಕೃಷ್ಣಮೃಗ ಬೇಟೆ (Blackbuck Case) ಪ್ರಕರಣವನ್ನು ಆಧರಿಸಿ ಸಿದ್ಧವಾಗುತ್ತಿರುವ ಹೊಸ ಸಿನಿಮಾ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ನಟ ಸಲ್ಮಾನ್ ಖಾನ್ (Salman Khan) ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಸವಾಲು ಹಾಕಿದೆ.

ಅಮಿತ್ ಜಾನಿ ನಿರ್ಮಾಣದ ಈ ಕ್ರೈಮ್ ಥ್ರಿಲ್ಲರ್ ಮತ್ತು ಕೋರ್ಟ್‌ರೂಮ್ ಡ್ರಾಮಾ ಚಿತ್ರದ ಟೀಸರ್ ಸಂಪೂರ್ಣವಾಗಿ ಸಲ್ಮಾನ್ ಖಾನ್ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ಹಗೆತನವನ್ನು ಹೋಲುವಂತಿದೆ. ಟೀಸರ್‌ನಲ್ಲಿ ಸಲ್ಮಾನ್ ಖಾನ್ ಅವರನ್ನೇ ಹೋಲುವ ನಟ ಕಾಸಿಫ್ ಇಕ್ಬಾಲ್ ಖಾನ್ ಅವರು ‘ಅಯಾನ್ ಖಾನ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಅವರ ಐಕಾನಿಕ್ ಗುರುತಾದ ನೀಲಿ ಬಣ್ಣದ ಬ್ರೇಸ್‌ಲೆಟ್ ಅನ್ನು ಸಹ ಈ ಪಾತ್ರಕ್ಕೆ ತೊಡಿಸಲಾಗಿದೆ. ಈ ಅಯಾನ್ ಖಾನ್ ಕಾಡಿನಲ್ಲಿ ಕೃಷ್ಣಮೃಗವನ್ನು ಬೇಟೆಯಾಡುವುದು ಮತ್ತು ನಂತರ ಜೈಲಿನಲ್ಲಿರುವ ‘ಲಯನ್ ಬಿಷ್ಣೋಯ್’ ಎಂಬ ಪಾತ್ರದಿಂದ ಕೊಲೆ ಬೆದರಿಕೆ ಪಡೆಯುವ ದೃಶ್ಯಗಳು ಟೀಸರ್‌ನಲ್ಲಿವೆ.

ಚಿತ್ರತಂಡವು ಕಾನೂನು ಕೈಯಿಂದ ಬಚಾವಾಗಲು ಪಾತ್ರಗಳ ಹೆಸರನ್ನು ಬದಲಾಯಿಸಿದೆ. ಸಲ್ಮಾನ್ ಖಾನ್ ಹೆಸರನ್ನು ‘ಅಯಾನ್ ಖಾನ್’ ಎಂದು, ಲಾರೆನ್ಸ್ ಬಿಷ್ಣೋಯ್ ಹೆಸರನ್ನು ‘ಲಯನ್ ಬಿಷ್ಣೋಯ್’ ಎಂದು ಬದಲಾಯಿಸಲಾಗಿದೆ. ಇಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ದಬಾಂಗ್’ನ ಚುಲ್ಬುಲ್ ಪಾಂಡೆ ಪಾತ್ರವನ್ನು ಇಲ್ಲಿ ‘ಬುಲ್ಬುಲ್ ಚೌಬೆ’ ಎಂದು ಮರುಸೃಷ್ಟಿಸಲಾಗಿದೆ. ಟೀಸರ್‌ನಲ್ಲಿ ಬರುವ ಒಂದು ಸಂಭಾಷಣೆ ಈಗ ವೈರಲ್ ಆಗಿದೆ. ‘ಮುಂಬೈ ಅಂಡರ್‌ವರ್ಲ್ಡ್‌ಗೆ ಒಬ್ಬನೇ ಬಾಸ್ ಇದ್ದ, ಅವನೇ ದಾವೂದ್.. ಆದರೆ ಇವತ್ತು ದಾವೂದ್‌ಗೂ ಒಬ್ಬ ಅಪ್ಪ ಇದ್ದಾನೆ, ಅವನ ಹೆಸರೇ ಲಯನ್ ಬಿಷ್ಣೋಯ್!’ ಎಂಬ ಡೈಲಾಗ್ ಇದೆ.

‘ಕಾಲಾ ಹಿರಣ್’ ಸಿನಿಮಾದ ಟೀಸರ್:

​KALA HIRAN | OFFICIAL FIRST LOOK | BHARAT S. SHRINATE | AMIT JANI |

ಹಿರಿಯ ನಟ ಗೋವಿಂದ್ ನಾಮದೇವ್ ಅವರು ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಗಳು ಮತ್ತು ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಅವರನ್ನೇ ಹೋಲುವ ಪಾತ್ರಗಳ ಝಲಕ್ ಕೂಡ ಟೀಸರ್‌ನಲ್ಲಿದೆ.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ

ಈ ಚಿತ್ರವು ತನ್ನ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಮತ್ತು ಸಾರ್ವಜನಿಕವಾಗಿ ತನ್ನ ಇಮೇಜ್‌ಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಈಗ ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ತಾವು ಈಗಾಗಲೇ ಖುಲಾಸೆಗೊಂಡಿದ್ದರೂ, ಚಿತ್ರದ ಪೋಸ್ಟರ್‌ನಲ್ಲಿ ತಮ್ಮನ್ನು ಹೋಲುವ ಪಾತ್ರದ ಕೈಗೆ ಗನ್ ನೀಡಿ ಸಾರ್ವಜನಿಕರನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದು ಸಲ್ಮಾನ್ ವಾದಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us