ಕೃಷ್ಣಮೃಗ ಬೇಟೆ ಕುರಿತ ‘ಕಾಲಾ ಹಿರನ್’ ಸಿನಿಮಾ ಸಲ್ಮಾನ್ ಖಾನ್ ಬಯೋಪಿಕ್ ಅಲ್ಲ: ನಿರ್ಮಾಪಕರ ಸ್ಪಷ್ಟನೆ
‘ಕಾಲಾ ಹಿರನ್’ ಸಿನಿಮಾ ಮೇಲೆ ಸಲ್ಮಾನ್ ಖಾನ್ ಅವರಿಗೆ ಅಸಮಾಧಾನ ಇದೆ. ಈ ಚಿತ್ರದ ಟೀಸರ್ ಬಿಡುಗಡೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಈಗಾಗಲೇ ಬಿಡುಗಡೆ ಮಾಡಲಾಗಿರುವ ಪೋಸ್ಟರ್‌ಗಳನ್ನು ಹಿಂಪಡೆಯಬೇಕು ಎಂದು ಸಲ್ಮಾನ್ ಖಾನ್ ಅವರ ತಂಡವು ನೋಟಿಸ್ ಕಳಿಸಿದೆ. ಅದಕ್ಕೆ ಚಿತ್ರದ ನಿರ್ಮಾಪಕ ಅಮಿತ್ ಜಾನಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎನ್ನಲಾದ ‘ಕಾಲಾ ಹಿರನ್’ (Kala Hiran) ಸಿನಿಮಾ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದೆ. ಈ ನೋಟಿಸ್ ಪ್ರತಿಯನ್ನು ಚಿತ್ರದ ನಿರ್ಮಾಪಕ ಅಮಿತ್ ಜಾನಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾವು ‘ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ’ ಎಂದು ಸಲ್ಮಾನ್ ಖಾನ್ (Salman Khan) ಅವರ ತಂಡ ಆರೋಪಿಸಿದೆ. ಅದಕ್ಕೆ ನಿರ್ಮಾಪಕರು ತಿರುಗೇಟು ನೀಡಿದ್ದಾರೆ.
ಈ ಕಾನೂನು ಹೋರಾಟದ ಕುರಿತು ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ನಿರ್ಮಾಪಕ ಅಮಿತ್ ಜಾನಿ ಅವರು ಸಲ್ಮಾನ್ ಖಾನ್ ಅವರ ಈ ಕಾನೂನು ಕ್ರಮ ಅತ್ಯಂತ ಆತುರದ್ದು ಮತ್ತು ಅನಗತ್ಯ ಎಂದು ಹೇಳಿದ್ದಾರೆ. ‘ಇದು ಸಲ್ಮಾನ್ ಖಾನ್ ಅವರ ಬಯೋಪಿಕ್ ಖಂಡಿತಾ ಅಲ್ಲ. ಈ ಚಿತ್ರವು ಸಾರ್ವಜನಿಕ ವಲಯದಲ್ಲಿರುವ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ವನ್ಯಜೀವಿಗಳನ್ನು ರಕ್ಷಿಸಲು ಬಿಷ್ಣೋಯ್ ಸಮುದಾಯದವರು ನಡೆಸಿದ ಹೋರಾಟ ಮತ್ತು ಇತಿಹಾಸವನ್ನು ನಾವು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಕಾಲಾ ಹಿರನ್ ಚಿತ್ರದಿಂದ ಸದ್ಯಕ್ಕೆ ಕೇವಲ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಇನ್ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಜೂನ್ 20ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಯಾವುದೇ ಚರ್ಚೆ ಮಾಡದೇ ಈ ಹಂತದಲ್ಲೇ ಲೀಗಲ್ ನೋಟಿಸ್ ಕಳುಹಿಸಿರುವುದು ಸರಿಯಲ್ಲ’ ಎಂದು ನಿರ್ಮಾಪಕ ಅಮಿತ್ ಜಾನಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಅಮಿತ್ ಜಾನಿ ಸ್ಪಷ್ಟನೆ:
View this post on Instagram
ಚಿತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ನೆಗೆಟಿವ್ ಆಗಿ ಬಿಂಬಿಸಿಲ್ಲ ಅಥವಾ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ವೈಭವೀಕರಿಸಿಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳು ಈಗಾಗಲೇ ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದಿರುವ ವಿಷಯಗಳಾಗಿದ್ದು, ಅದನ್ನು ತೆರೆಯ ಮೇಲೆ ತೋರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ: ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್
ಒಂದು ವೇಳೆ ಈ ವಿಷಯವಾಗಿ ನ್ಯಾಯಾಲಯದಿಂದ ನಮಗೆ ಕರೆ ಬಂದರೆ, ನಾವು ಖಂಡಿತಾ ಕೋರ್ಟ್‌ಗೆ ಹಾಜರಾಗಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. ಈ ಹಿಂದಿನ ಪ್ರಕರಣಗಳಲ್ಲೂ ನಾವು ಕಾನೂನು ಪ್ರಕ್ರಿಯೆಯನ್ನು ಗೌರವಿಸಿದ್ದೇವೆ, ಈಗಲೂ ಅದನ್ನೇ ಪಾಲಿಸುತ್ತೇವೆ ಎಂದು ಅಮಿತ್ ಜಾನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




