ಸಲ್ಮಾನ್ ಖಾನ್ ಸೂಪರ್ ಹೀರೋ ಸಿನಿಮಾಗೆ ಸಮಂತಾ ಬದಲು ಕರೀನಾ ನಾಯಕಿ?

ಸಲ್ಮಾನ್ ಖಾನ್ ಅವರು ಸೂಪರ್ ಹೀರೋ ಕಥೆ ಇರುವ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಾಯಕಿ ಯಾರು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಕರೀನಾ ಕಪೂರ್ ಖಾನ್ ಜೊತೆಗೆ ಚಿತ್ರತಂಡ ಈಗಾಗಲೇ ಮಾತುಕತೆ ನಡೆಸಿದೆ.

ಸಲ್ಮಾನ್ ಖಾನ್ ಸೂಪರ್ ಹೀರೋ ಸಿನಿಮಾಗೆ ಸಮಂತಾ ಬದಲು ಕರೀನಾ ನಾಯಕಿ?
Kareena Kapoor, Salman Khan, Samantha

Updated on: May 05, 2026 | 6:33 PM

ಬಾಲಿವುಡ್‌ ನಟ ಸಲ್ಮಾನ್ ಖಾನ್ (Salman Khan) ಮತ್ತು ಖ್ಯಾತ ನಿರ್ದೇಶಕರಾದ ರಾಜ್-ಡಿಕೆ (Raj-DK) ಅವರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಮನೆ ಮಾಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಇಷ್ಟ ದಿನ ಸಮಂತಾ ರುತ್ ಪ್ರಭು ಹೆಸರು ಕೇಳಿಬರುತ್ತಿತ್ತು. ಆದರೆ ಈಗ ಈಗ ಕರೀನಾ ಕಪೂರ್ ಖಾನ್ (Kareena Kapoor) ಬಗ್ಗೆ ಸುದ್ದಿ ಹಬ್ಬಿದೆ.

1. ಸಲ್ಮಾನ್ ಖಾನ್ ಹೊಸ ಸಿನಿಮಾದಲ್ಲಿ ಇರಲಿದೆ ಸೂಪರ್ ಹೀರೋ ಕಥೆ.

2. ನಾಯಕಿಯ ಆಯ್ಕೆಯ ಬಗ್ಗೆ ಕೇಳಿಬರುತ್ತಿವೆ ಇಂಟರೆಸ್ಟಿಂಗ್ ವಿಷಯಗಳು.

3. ಸಮಂತಾ ರುತ್ ಪ್ರಭು ಬದಲಿಗೆ ಕರೀನಾ ಎಂಟ್ರಿ ನೀಡಿರುವ ಸಾಧ್ಯತೆ ಇದೆ.

 

ಆರಂಭದಲ್ಲಿ ಈ ಸಿನಿಮಾಗೆ ಸೌತ್ ಸುಂದರಿ ಸಮಂತಾ ರುತ್ ಪ್ರಭು ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ರಾಜ್ ಮತ್ತು ಡಿಕೆ ಅವರ ಜೊತೆ ಸಮಂತಾ ಈಗಾಗಲೇ ‘ಸಿಟಾಡೆಲ್’, ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಕೆಲಸ ಮಾಡಿರುವುದರಿಂದ ಅವರೇ ಫೈನಲ್ ಎನ್ನಲಾಗಿತ್ತು. ಆದರೆ, ತಾಜಾ ವರದಿಗಳ ಪ್ರಕಾರ ಬಾಲಿವುಡ್ ನಟಿ ಕರೀನಾ ಕಪೂರ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಸಿನಿಮಾದ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಕರೀನಾ ಕಪೂರ್ ಅವರಿಗೆ ಕರೆ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಕರೀನಾ ಕೂಡ ಈ ಪ್ರಾಜೆಕ್ಟ್ ಬಗ್ಗೆ ಆಸಕ್ತಿ ತೋರಿಸಿದ್ದು, ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಇದು ಅಧಿಕೃತವಾದರೆ, ಸಲ್ಮಾನ್ ಮತ್ತು ಕರೀನಾ ಜೋಡಿ ಐದನೇ ಬಾರಿಗೆ ಪರದೆಯ ಮೇಲೆ ಒಂದಾದಂತಾಗುತ್ತದೆ. ಈ ಹಿಂದೆ ಅವರು ‘ಬಜರಂಗಿ ಭಾಯಿಜಾನ್’, ‘ಬಾಡಿಗಾರ್ಡ್’, ‘ಕ್ಯೂಂಕಿ’ ಮತ್ತು ‘ಮೈ ಔರ್ ಮಿಸಸ್ ಖನ್ನಾ’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ವಿಶೇಷವೆಂದರೆ ರಾಜ್-ಡಿಕೆ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಯಸ್ಸಾದ ಒಬ್ಬ ಸೂಪರ್ ಹೀರೋ, ಅನಿವಾರ್ಯ ಕಾರಣಗಳಿಂದಾಗಿ ಮತ್ತೆ ಅಖಾಡಕ್ಕೆ ಇಳಿಯುವ ವಿಭಿನ್ನ ಕಥಾಹಂದರವನ್ನು ಈ ಚಿತ್ರ ಹೊಂದಿರಲಿದೆ ಎನ್ನಲಾಗಿದೆ. ಆದ್ದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಆಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ

ಈ ಬಿಗ್ ಬಜೆಟ್ ಸಿನಿಮಾವನ್ನು ಅತುಲ್ ಅಗ್ನಿಹೋತ್ರಿ ಮತ್ತು ಮೈತ್ರಿ ಮೂವೀ ಮೇಕರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರನ್ನು ರಾಜ್-ಡಿಕೆ ಯಾವ ರೀತಿ ತೆರೆಯ ಮೇಲೆ ತೋರಿಸಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸಮಂತಾ ಸದ್ಯಕ್ಕೆ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಲ್ಮಾನ್ ಚಿತ್ರದ ಆಫರ್ ಅವರಿಗೆ ನಿಜವಾಗಿಯೂ ಹೋಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಸದ್ಯ ಅವರು ‘ಮಾ ಇಂಟಿ ಬಂಗಾರಂ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:31 pm, Tue, 5 May 26

Follow Us